ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

Public TV
2 Min Read
CHINA DOCTOR

ಬೀಜಿಂಗ್:‌ ಕಣ್ಣಿನ ವೈದ್ಯರೊಬ್ಬರು (Eye Doctor) ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಹೊಡೆದ ಘಟನೆ ಚೀನಾದಲ್ಲಿ (China) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಈ ಘಟನೆ 2019ರಲ್ಲಿ ನಡೆದಿದ್ದು, ಇದರ ವೀಡಿಯೋ ಸಾಕಷ್ಟು ವೈರಲ್‌ (Viral Video) ಆಗಿದೆ. ಈ ಸಂಬಂಧ ಆಸ್ಪತ್ರೆಯೂ ಕೂಡ ಸ್ಪಷ್ಟನೆಯ ಹೇಳಿಕೆ ಬಿಡುಗಡೆ ಮಾಡಿತ್ತು. ಸದ್ಯ ವೈದ್ಯನನ್ನೇ ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ.

doctor

ನಡೆದಿದ್ದೇನು..?: 82 ವರ್ಷದ ವೃದ್ಧೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ (Eye Surgery) ಆಸ್ಪತ್ರೆಗೆ ಹೋದರು. ಈ ವೇಳೆ ವೈದ್ಯರು ವೃದ್ಧೆಗೆ ಅನಸ್ತೇಶಿಯಾ ನೀಡಿದ್ದಾರೆ. ಈ ವೇಳೆ ವೈದ್ಯರು ಭಾಷೆ ವೃದ್ಧೆಗೆ ಅರ್ಥವಾಗುತ್ತಿರಲಿಲ್ಲ. ವೃದ್ಧೆ ಸ್ಥಳೀಯ ಭಾಷೆ ಮಾತನಾಡುತ್ತಿದ್ದರಿಂದ ಆಕೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ತನ್ನ ಮಾತಿಗೆ ವೃದ್ಧೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಿಟ್ಟುಗೊಂಡು ತಲೆಗೆ ಮೂರು ಬಾರಿ ಹೊಡೆದಿದ್ದಾರೆ.

ಈ ಘಟನೆ ತುಂಬಾ ಹಳೆಯದ್ದಾಗಿದ್ದು, ಅಂದರೆ 2019ರಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯ ಸಂಪೂರ್ಣ ವೀಡಿಯೋ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವೀಡಿಯೋ ಸಾಕಷ್ಟು ವೈರಲ್‌ ಆಗಿತ್ತು, ಈಗಲೂ ವೈರಲ್‌ ಆಗುತ್ತಿದೆ.

ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಆಸ್ಪತ್ರೆ ಕೂಡ ಸ್ಪಷ್ಟನೆ ನೀಡಿದೆ. ಶಸ್ತ್ರಚಿಕಿತ್ಸೆಗಾಗಿ ರೋಗಿಗೆ ಅನಸ್ತೇಶಿಯಾ ನೀಡಲಾಯಿತು. ಆದರೆ ವೃದ್ಧೆ ಅದನ್ನು ಸಹಿಸಿಕೊಳ್ಳಲು ತಯಾರಿರಲಿಲ್ಲ. ಇಷ್ಟು ಮಾತ್ರವಲ್ಲದೇ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೃದ್ಧೆ ತನ್ನ ತಲೆ ಮತ್ತು ಕಣ್ಣುಗುಡ್ಡೆಗಳನ್ನು ಚಲಿಸುತ್ತಲೇ ಇದ್ದಳು. ರೋಗಿಯು ಸ್ಥಳೀಯ ಉಪಭಾಷೆಯನ್ನು ಮಾತನಾಡುತ್ತಿದ್ದರಿಂದ ಮ್ಯಾಂಡರಿನ್‌ನಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತುರ್ತು ಪರಿಸ್ಥಿತಿಯಲ್ಲಿಯೂ ರೋಗಿಗೆ ವೈದ್ಯರು ಚಿಕಿತ್ಸೆ ನೀಡಿದರು ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಆದರೂ ವೃದ್ಧೆಯ ಮೇಲೆ ವೈದ್ಯರು ತೋರಿದ ಅಮಾನವೀಯತೆಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶದ ಜೊತೆಗೆ ಖಂಡನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯು ಸದ್ಯ ವೈದ್ಯನನ್ನು ಅಮಾನತು ಮಾಡಿದೆ. ಅಲ್ಲದೆ ವೃದ್ಧೆಯ ಕ್ಷಮೆಯಾಚಿಸಿ ಆಸ್ಪತ್ರೆಯು ಆಕೆಗೆ 5,800 ರೂ. ಪರಿಹಾರವನ್ನು ನೀಡಿತು. ಈ ನಡುವೆ ತನ್ನ ತಾಯಿಯ ಎಡಗಣ್ಣು ಕುರುಡಾಗಿದೆ ಎಂದು ವೃದ್ಧೆಯ ಮಗ ಗಂಭೀರ ಆರೋಪ ಮಾಡಿದ್ದಾನೆ. ಆದರೆ ಇದು ಇದೇ ಘಟನೆಯಿಂದಾಗಿ ಇದು ಸಂಭವಿಸಿದೆ ಎಂದು ಸೂಚಿಸುವ ಯಾವುದೇ ವೈದ್ಯಕೀಯ ವರದಿಗಳಿಲ್ಲ ಎಂದು ಆಸ್ಪತ್ರೆ ಹೇಳಿದೆ.

Share This Article