ಬೀಜಿಂಗ್: ನಿರೀಕ್ಷೆಯಂತೆ ಅಮೆರಿಕ-ಚೀನಾ (USA-China) ನಡುವೆ ವಾಣಿಜ್ಯ ಯುದ್ಧ ಶುರುವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶುರು ಮಾಡಿದ ತೆರಿಗೆ ಯುದ್ಧಕ್ಕೆ (Tax War) ಚೀನಾ ಬಲವಾಗಿ ಪ್ರತಿಕ್ರಿಯೆ ನೀಡಿದೆ.
ಚೀನಾದಿಂದ ಬರುವ ಉತ್ಪನ್ನಗಳಿಗೆ 10%ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಕ್ಕೆ ಕ್ಸಿ ಜಿನ್‌ಪಿಂಗ್ ಸರ್ಕಾರ ಕೆರಳಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಲ್ಲಿದ್ದಲು, ದ್ರವೀಕೃತ ನ್ಯಾಚುರಲ್ ಗ್ಯಾಸ್ ಮೇಲೆ 15%ರಷ್ಟು ಸುಂಕ ವಿಧಿಸಿ ಚೀನಾ ಪ್ರತೀಕಾರ ತೆಗೆದುಕೊಂಡಿದೆ.
ಇಷ್ಟೇ ಅಲ್ಲದೇ ತೈಲ ಮತ್ತು ಕೃಷಿ ಉಪಕರಣ ಮೇಲೆ 10% ರಷ್ಟು ಸುಂಕವನ್ನು ಚೀನಾ ಪ್ರಕಟಿಸಿದೆ. ಟಂಗ್‌ಸ್ಟನ್‌ಗೆ ಸಂಬಂಧಿಸಿದ ಪದಾರ್ಥಗಳ ಮೇಲೆ ನಿರ್ಬಂಧ ವಿಧಿಸಿದೆ. ಪಿವಿಹೆಚ್ ಕಾರ್ಪೋರೇಷನ್, ಇಲ್ಯೂಮಿನಾ ಇಂಕ್‌ನಂತಹ ಅಮೆರಿಕ ಸಂಸ್ಥೆಗಳನ್ನು ನಂಬಿಕಾರ್ಹ ಸಂಸ್ಥೆಗಳ ಪಟ್ಟಿಯಿಂದ ತೆಗೆದು ಹಾಕಿದೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್
ಅನೈತಿಕ ವಾಣಿಜ್ಯ ಪದ್ಧತಿ ಅವಲಂಬಿಸುತ್ತಿರುವ ಅಮೆರಿಕದ ಟೆಕ್ ಸಂಸ್ಥೆ ಗೂಗಲ್ ವಿರುದ್ಧ ವಿಚಾರಣೆಗೆ ಜಿನ್‌ಪಿಂಗ್ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ ವಾಣಿಜ್ಯ ಯುದ್ಧ ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಆತಂಕ ಎದುರಾಗಿದೆ.
ಈಗಾಗಲೇ ಚೀನಾ ಕರೆನ್ಸಿ ಯುವಾನ್ ಮೌಲ್ಯ ಪತನವಾಗಿದೆ. ಈ ಪ್ರಭಾವ ಇತರೆ ದೇಶಗಳ ಮೇಲೂ ಬೀರಿದೆ. ಆಸ್ಟ್ರೇಲಿಯಾದ ಡಾಲರ್, ನ್ಯೂಜಿಲೆಂಡ್ ಡಾಲರ್ ಮೌಲ್ಯವೂ ಕುಸಿದಿದೆ.