ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 28,018 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಸಮಿತಿ ಮಾಹಿತಿ ನೀಡಿದೆ.
ಬುಧವಾರ ಒಂದೇ ದಿನ 73 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಹುಬೇಯ ಪ್ರಾಂತ್ಯದಲ್ಲಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹುಬೇಯನಲ್ಲಿ ಬುಧವಾರ 2,987 ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ಪತ್ತೆಯಾಗಿದೆ. ಈವರೆಗೆ ಹುಬೇಯದಲ್ಲಿ ಒಟ್ಟು 19,665 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ
ಹುಬೇಯ ಪ್ರಾಂತ್ಯದಲ್ಲಿ ಸೋಂಕು ತಗುಲಿರುವ 14,314 ಮಂದಿಯನ್ನು ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರಲ್ಲಿ 756 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಜಪಾನ್ ದೇಶದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 10 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಈಗ ಸೋಂಕು ತಗಲಿರುವವರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು 20 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಡೈಮಂಡ್ ಪ್ರಿನ್ಸೆಸ್ ಹಡಗನ್ನು ಸದ್ಯ ಯಾಕೋಹಾಮಾ ಬಂದರಿನಲ್ಲಿ ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ ಒಟ್ಟು 3,700 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಏಷ್ಯಾ, ಯುರೋಪ್, ಅಮೆರಿಕಾ, ಕೆನೆಡಾದಲ್ಲಿ ಸೋಂಕು ಹರಡಿದೆ. ಈವರೆಗೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.