– ಎಮ್ಮೆ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
– ಎಮ್ಮೆ ಉಳಿಸಲು 2.5 ಲಕ್ಷ ರೂ. ನೀಡಿದ ನೆಟ್ಟಿಗರು
ಬೀಜಿಂಗ್: ಕಸಾಯಿಖಾನೆಗೆ ಸಾಗಿಸದಂತೆ ಗರ್ಭಿಣಿ ಎಮ್ಮೆಯೊಂದು ಮಂಡಿಯೂರಿ ಬೇಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ತನ್ನ ಹಾಗೂ ಮಗುವಿನ ಜೀವ ಉಳಿಸುವಂತೆ ಎಮ್ಮೆಯು ಕಸಾಯಿಖಾನೆ ಸಿಬ್ಬಂದಿ ಮುಂದೆ ಮೊಣಕಾಲುಗಳ ಮೇಲೆ ಕುಳಿತುಕೊಂಡಿದೆ. ಎಮ್ಮೆಯು ತನ್ನ ಯಜಮಾನನನ್ನು ಬಿಡಲು ಸಿದ್ಧರಿಲ್ಲ. ಜೊತೆಗೆ ಕಣ್ಣೀರನ್ನು ಸಹ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಭಾನುವಾರ ಸಂಭವಿಸಿದೆ. ಗ್ವಾಂಡೊಂಗ್ ಪ್ರಾಂತ್ಯದ ಶಾಂತೌನಲ್ಲಿ ಎಮ್ಮೆಯನ್ನು ಕಸಾಯಿಖಾನೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಎಮ್ಮೆ ಹೋಗಲು ಸಿದ್ಧವಾಗಿಲ್ಲ. ಕಸಾಯಿಖಾನೆ ಸಿಬ್ಬಂದಿಯ ಭಾರೀ ಪ್ರಯತ್ನ ಬಳಿಕ ಎಮ್ಮೆ ಲಾರಿಯಿಂದ ಕೆಳಗೆ ಇಳಿಯಿತು. ಅಷ್ಟೇ ಅಲ್ಲದೆ ಅಲ್ಲಿಯೂ ಮೊಣಕಾಲುಗಳ ಮೇಲೆ ನಿಂತು ಪರಿಪರಿಯಾಗಿ ಬೇಡಿಕೊಂಡಿತು. ಈ ದೃಶ್ಯವನ್ನು ಸ್ಥಳದಲ್ಲಿದ್ದ ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
ವಿಡಿಯೋವನ್ನು ನೋಡಿದ ನೆಟ್ಟಿಗರು ಮರುಕ ವ್ಯಕ್ತಪಡಿಸಿ, ಎಮ್ಮೆಯನ್ನು ಉಳಿಸಲು ಮುಂದಾದರು. ಈ ನಿಟ್ಟಿನಲ್ಲಿ ಆನ್‍ಲೈನ್‍ನಲ್ಲಿ 2.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕಸಾಯಿಖಾನೆಯ ನೌಕರರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಗರ್ಭಿಣಿ ಎಮ್ಮೆಯ ಪ್ರಾಣ ಉಳಿದಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಸಾಯಿಖಾನೆ ಉದ್ಯೋಗಿ, ನಾವು ಎಮ್ಮೆಯನ್ನು ಲಾರಿಯಿಂದ ಕೆಳಗೆ ಇಳಿಸುವಾಗ ಅದು ನೆಲದ ಮೇಲೆ ಕುಳಿತುಕೊಳ್ಳುತ್ತಿತ್ತು. ಅಷ್ಟೇ ಅಲ್ಲದೆ ಜೋರಾಗಿ ಕೂಗುತ್ತಿತ್ತು ಎಂದು ತಿಳಿಸಿದ್ದಾರೆ.
ಮಾಧ್ಯಮವೊಂದರ ಪ್ರಕಾರ, ಈ ವಿಡಿಯೋದಲ್ಲಿ ಎಮ್ಮೆಯು ತಾನು ಬದುಕಬೇಕು ಎಂಬ ಬಯಕೆಯನ್ನು ತೋರಿಸಿದೆ. ಇದನ್ನು ಅನೇಕ ಪ್ರಾಣಿಪ್ರೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ನಂತರ ಕೆಲವರು ಎಮ್ಮೆ ಉಳಿಸಲು ಬೆಲೆಯನ್ನು ನಿಗದಿಪಡಿಸಲು ಕಸಾಯಿಖಾನೆಯ ಮಾಲೀಕರನ್ನು ಕೇಳಿದ್ದರು. ಹೀಗಾಗಿ ಎಮ್ಮೆಯ ಬೆಲೆಯನ್ನು 24,950 ಯುವಾನ್‍ಗೆ (ಸುಮಾರು 2.5 ಲಕ್ಷ ರೂಪಾಯಿಗಳಿಗೆ) ಖರೀದಿಸಿದರು. ನಂತರ ಎಮ್ಮೆಯನ್ನು ಸ್ಥಳೀಯ ಬೌದ್ಧ ದೇವಾಲಯಕ್ಕೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
ಜನರು ಎಮ್ಮೆಯನ್ನು ವಾಹನದಲ್ಲಿ ಹೊತ್ತುಕೊಂಡು ಹೋಗಿ ಬೌದ್ಧ ದೇವಾಲಯಕ್ಕೆ ಹಸ್ತಾಂತರಿಸಿದ ವಿಡಿಯೋವನ್ನು ಮಾಡಲಾಗಿದೆ. ಜೊತೆಗೆ ದಾನಿಗಳು ಎಮ್ಮೆಯ ಆರೈಕೆಗಾಗಿ 40 ಸಾವಿರ ರೂ. (4,000 ಯುವಾನ್) ಪ್ರತ್ಯೇಕವಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.