ನವದೆಹಲಿ: ಬೈಟೆಡಾನ್ಸ್ ಮಾಲೀಕತ್ವದ ವೀಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ 2 ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿತ್ತು. ಸಾವಿರಾರು ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್ ಅನ್ನು ಭಾರತ ಸರ್ಕಾರ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ನಿಷೆಧಿಸಿತ್ತು. ಇದೀಗ ಟಿಕ್‌ಟಾಕ್ ಮತ್ತೆ ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಟಿಕ್‌ಟಾಕ್ ಭಾರತದಲ್ಲಿ ಹೊಸ ಪಾಲುದಾರರನ್ನು ಹುಡುಕುತ್ತಿರುವುದಾಗಿ ವರದಿಯಾಗಿದೆ. ಪ್ರಸ್ತುತ ಬೈಟೆಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮರಳಿ ತರಲು ಮುಂಬೈ ಮೂಲದ ಹಿರನಂದಾನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್
ಹಿರನಂದಾನಿ ಗ್ರೂಪ್ ಮುಂಬೈ, ಬೆಂಗಳೂರು ಹಾಗೂ ಚೆನ್ನೈನಾದ್ಯಂತ ಯೋಜನೆಗಳನ್ನು ಹೊಂದಿದ್ದು, ಇದು ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ. ಇದು ರಿಯಲ್ ಎಸ್ಟೇಟ್ ದೈತ್ಯ ಯೊಟ್ಟಾ ಇನ್ಫ್ರಾಸ್ಟ್ರಕ್ಚರ್ ಸೊಲ್ಯೂಷನ್ಸ್ ಅಡಿಯಲ್ಲಿ ಡೇಟಾ ಸೆಂಟರ್ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ತಂತ್ರಜ್ಞಾನ ನೇತೃತ್ವದ ಗ್ರಾಹಕ ಸೇವೆ ಆರ್ಮ್ ಟೆಜ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.
ವರದಿಗಳ ಪ್ರಕಾರ ಎರಡೂ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಇದರ ಯೋಜನೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಮ್ಮೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ. ಆದರೆ ಯೋಜನೆಗಳ ಬಗ್ಗೆ ತಿಳಿಸಲಾಗಿದೆ. ಇದರ ಬಗ್ಗೆ ಕಂಪನಿ ಅನುಮೋದನೆಗೆ ಬಂದಾಗ ಅವರ ವಿನಂತಿಯನ್ನು ಪರಿಶೀಲಿಸಲಿದ್ದೇವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1
ಚೀನಾದೊಂದಿಗಿನ ಭಾರತದ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲದಿದ್ದರೂ ಚೀನಾ ಮೂಲದ ಅಪ್ಲಿಕೇಶನ್ ಮತ್ತೆ ಭಾರತದಲ್ಲಿ ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಆದರೆ ಭಾರತ ಇದಕ್ಕೆ ಅವಕಾಶ ನೀಡುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.