ತೈಪೆ: ಕೆಲ ದಿನಗಳಿಂದ ಶಾಂತವಾಗಿದ್ದ ಅಮೆರಿಕ-ಚೀನಾ ನಡುವಿನ ತೈವಾನ್ ಸಂಘರ್ಷ (Taiwan Clash) ಮತ್ತೆ ಸದ್ದು ಮಾಡ್ತಿದೆ. ಅಮೆರಿಕ (US) ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ತೈವಾನ್ ಭೇಟಿಯ ನಂತರ ಚೀನಾ ಮತ್ತೊಮ್ಮೆ ತೈವಾನ್ ಗಡಿಯಲ್ಲಿ 71 ಯುದ್ಧ ವಿಮಾನಗಳಿಂದ (Fighter Jet) ತಾಲೀಮು ನಡೆಸಿದೆ.
ಇಂದು ಮುಂಜಾನೆ 6 ಗಂಟೆ ವೇಳೆ ಚೀನಾದ 71 ಯುದ್ಧ ವಿಮಾನಗಳು ಹಾಗೂ 7 ನೌಕಾ ಹಡಗುಗಳು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಲೀಮು ನಡೆಸಿವೆ. ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಅತೀ ದೊಡ್ಡದಾದ ಮಿಲಿಟರಿ (Chinese Military Aircraft) ಶಕ್ತಿ ಪ್ರದರ್ಶನವಾಗಿದೆ. ಇದನ್ನೂ ಓದಿ: ತೈವಾನ್‌ನಲ್ಲಿ ಅಮೆರಿಕ ಸ್ಪೀಕರ್ – ಚೀನಾ ಕೆಂಡಾಮಂಡಲ
ಈ ಕುರಿತು ಪ್ರತಿಕ್ರಿಯಿಸಿರುವ ತೈವಾನ್ ರಕ್ಷಣಾ ಸಚಿವಾಲಯವು (Taiwan’s Ministry Of Defense), ಇದು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಮಿಲಿಟರಿ ಬೆದರಿಕೆ ಎಂದು ಹೇಳಿದೆ. ಚೀನಾದ ಅತ್ಯಾಧುನಿಕ 6 ಎಸ್‌ಯು-30 ಯುದ್ಧ ವಿಮಾನಗಳು ಸೇರಿ ಒಟ್ಟು 60 ಫೈಟರ್ ಜೆಟ್‌ಗಳು ತಾಲೀಮಿನಲ್ಲಿದ್ದವು. ಈ ಪೈಕಿ 47 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದ್ದು, ನೈಋತ್ಯ ವಾಯು ರಕ್ಷಣಾ ಗುರುತಿನ ವಲಯ ಪ್ರವೇಶಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಅಮೆರಿಕ ಸ್ಪೀಕರ್ ಭೇಟಿ ಬೆನ್ನಲ್ಲೇ ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ
ಅಷ್ಟೇ ಅಲ್ಲದೇ ಚೀನಾ ತನ್ನ 7 ನೌಕಾ ಹಡಗುಗಳನ್ನು ದ್ವೀಪದ ಬಳಿ ಕಳುಹಿಸಿದೆ. ಇದಕ್ಕೆಲ್ಲ ತೈವಾನ್ ಹೆದರಲ್ಲ. ಚೀನಾದ ಮಿಲಿಟರಿ ಬೆದರಿಕೆಯನ್ನು ತಡೆಯುವ ಗುರಿ ಸಾಮರ್ಥ್ಯ ಹೊಂದಿದೆ. ಸಶಸ್ತ್ರ ಪಡೆಗಳು ಈಗಾಗಲೇ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿವೆ. ಚೀನಾಕ್ಕೆ ತಿರುಗೇಟು ನೀಡಲು ನಾಗರಿಕ ವಾಯುಗಸ್ತು ವಿಮಾನ (CAP Plane), ನೌಕಾಪಡೆಯ ಹಡಗುಗಳು ಹಾಗೂ ಭೂ ಆಧಾರಿತ ಕ್ಷಪಣಿ ವ್ಯವಸ್ಥೆ ಮಾಡಿಕೊಂಡಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.
ತೈವಾನ್ (Taiwan) ಹಾಗೂ ಅಮೆರಿಕ ನಡುವಿನ ಅನೇಕ ಒಪ್ಪಂದಗಳಿಂದಾಗಿ ಚೀನಾ ಕೆಂಡಾಮಂಡಲವಾಗಿದ್ದು, ತೈವಾನ್ ಸುತ್ತಲೂ ತಾಲೀಮು ನಡೆಸಿದೆ. ಕಳೆದ ವಾರ 200 ಕೋಟಿ ಡಾಲರ್ ಶಸ್ತ್ರಾಸ್ತ್ರ ನಿಧಿ ಒಳಗೊಂಡಂತೆ, 1.7 ಲಕ್ಷಕೋಟಿ ಡಾಲರ್ ಸಹಾಯ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. 10 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರವನ್ನು ತೈವಾನ್‌ಗೆ ಮಾರಾಟ ಮಾಡಲು ಮುಂದಾದ ಅಮೆರಿಕ ನಿರ್ಧಾರಕ್ಕೆ ಚೀನಾ ರಕ್ಷಣಾ ಸಚಿವಾಲಯ ಸಿಟ್ಟು ಹೊರಹಾಕಿ ನಮ್ಮ ತೈವಾನ್ ಆಂತರಿಕ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.
ಈ ಹಿಂದೆ ಚೀನಾ ರಷ್ಯಾ ನಿರ್ಮಿತ ಸುಖೋಯ್ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿಯಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ತೈವಾನ್ ಹೊಡೆದುರುಳಿಸಿತ್ತು. ಇದಾದ ನಂತರ ಆಗಸ್ಟ್ನಲ್ಲಿ ಅಮೆರಿಕದ ಸ್ಪೀಕರ್‌ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದರು. ಇದರಿಂದ ಕೆಂಡಾಮಂಡಲವಾದ ಚೀನಾ ಪೆಲೋಸಿ ತೈವಾನ್ ನೆಲಕ್ಕೆ ಕಾಲಿಟ್ಟರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ. ತಮ್ಮ ಸೇನೆ ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ಸಹ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಚೀನಾ 4 ಯುದ್ಧ ನೌಕೆಗಳನ್ನು ತೈಪೆ ಬಳಿಯ ಸಮುದ್ರದಲ್ಲಿ ಸಜ್ಜಾಗಿ ಇರಿಸಿತ್ತು. ಇದರಲ್ಲಿ ಯುದ್ಧ ವಿಮಾನಗಳನ್ನು ಕೊಂಡೊಯ್ಯುವ ನೌಕೆಯೂ ಇತ್ತು. ಆದರೆ ಅಮೆರಿಕ ಇದಕ್ಕೆ ಹೆದರದೇ ಬದಲಾಗಿ ಏನಾಗುತ್ತದೋ ಆಗಲಿ ಎಂದು ನ್ಯಾನ್ಸಿ ಪೆಲೋಸಿಯನ್ನು ಮಲೇಶಿಯಾದಿಂದ ತೈವಾನಿಗೆ ಕಳುಹಿಸಿಕೊಟ್ಟಿತ್ತು.