ಕೇಪ್‍ಟೌನ್: ಗಂಡಾನೆಯೊಂದು ಮರಿಯಾನೆಯನ್ನ ಸೊಂಡಿಲಿನಿಂದ ಎತ್ತಿ ಎಸೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ ಅಡ್ಡೋ ಎಲಿಫ್ಯಾಂಟ್ ನ್ಯಾಷನಲ್ ಪಾರ್ಕ್‍ನಲ್ಲಿ ಈ ವಿಡಿಯೋವನ್ನ ಚಿತ್ರೀಕರಿಸಲಾಗಿದೆ. ಗಂಡು ಆನೆ ತನ್ನ ಕಾಲಿನಷ್ಟೂ ಉದ್ದವಿರದ ಮರಿಯಾನೆಯನ್ನ ಸೊಂಡಿಲಿನಿಂದ ಹಿಡಿದು ಎಸೆಯುತ್ತದೆ. ನೆಲಕ್ಕೆ ಬಿದ್ದ ಮರಿಯಾನೆ ಮೇಲೇಳಲು ಯತ್ನಿಸಿದಾಗ ಅದನ್ನ ಗಂಡಾನೆ ತನ್ನ ಸೊಂಡಿಲಿನಿಂದ ಮೇಲೇಳಿಸಿ ಮತ್ತೊಮ್ಮೆ ಎಸೆಯುತ್ತದೆ.
ಈ ಮಧ್ಯೆ ಅಡ್ಡ ಬಂದ ಇತರೆ ಆನೆಗಳನ್ನೂ ಗಂಡಾನೆ ಅಟ್ಟಾಡಿಸಿಕೊಂಡು ಹೋಗೋದನ್ನ ವಿಡಿಯೋದಲ್ಲಿ ನೋಡಬಹುದು. ಮಿಲನದ ಸಂದರ್ಭದಲ್ಲಿ ಮಧ್ಯೆ ಬಂದಿದ್ದರಿಂದ ಗಂಡಾನೆ ಈ ಮರಿಯಾನೆಯ ಮೇಲೆ ಈ ರೀತಿ ಕೋಪ ತೋರಿಸುತ್ತಿದೆ ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದೆ.
ಆದ್ರೆ ಮರಿಯಾನೆ ಮಾತ್ರ ತಾನು ಮಾಡಿದ ತಪ್ಪಾದ್ರೂ ಏನು ಅನ್ನೋ ಥರ ಕಕ್ಕಾಬಿಕ್ಕಿಯಾಗಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಘಟನೆಯನ್ನ ಪ್ರತ್ಯಕ್ಷವಾಗಿ ಕಂಡ ಛಾಯಾಗ್ರಾಹಕ ಲಾಯ್ಡ್ ಕಾರ್ಟರ್ ಹಾಗೂ ಗೈಡ್ ಆಗಿರೋ ಜೆನಿ ಸ್ಮಿತೀಸ್ ಎಂಬವರು ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.