ರಾಜಗುರು ಬಿ ನಿರ್ದೇಶನದ `ಕೆರೆಬೇಟೆ’ (Kerebete) ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣಲಿದೆ. ಕನ್ನಡ ಚಿತ್ರರಂಗದಲ್ಲಿ ಅದ್ಯಾವ ತೆರನಾದ ಕ್ರೇಜ್ ಸೃಷ್ಟಿಯಾಗಿದ್ದರೂ, ಅದೆಂಥಾ ಅಲೆ ಮೂಡಿಕೊಂಡಿದ್ದರೂ ಸಹಜ ಶೈಲಿಯ ಗ್ರಾಮ್ಯ ಕಥಾನಕಗಳಿಗಾಗಿ ಕಾಯುವವರಿದ್ದಾರೆ. ಆ ಬಗೆಯ ಸಿನಿಮಾಗಳು ಅಪರೂಪಕ್ಕೊಮ್ಮೆ ಪ್ರತ್ಯಕ್ಷವಾಗಿ ದೊಡ್ಡ ಮಟ್ಟದಲ್ಲಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆ ಸಾಲಿಗೆ ಕೆರೆಬೇಟೆ ಕೂಡಾ ದಾಖಲಾಗುವಂಥಾ ದಟ್ಟ ಸೂಚನೆಗಳು ಸದ್ಯಕ್ಕೆ ಕಾಣಿಸುತ್ತಿವೆ. ಕಥೆ ಮಾತ್ರವಲ್ಲದೇ, ಆಯಾ ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ಪಾತ್ರ ವರ್ಗದ ವಿಚಾರದಲ್ಲಿಯೂ ಈ ಚಿತ್ರ ವಿಶೇಷತೆಗಳಿಂದ ಕೂಡಿದೆ. ಹಾಸ್ಯ ಸಂಬಂಧಿತ ಶೋಗಳಲ್ಲಿ ಪ್ರಸಿದ್ಧಿ ಪಡೆದ ಕಲಾವಿದರೂ ಇಲ್ಲಿದ್ದಾರೆ. ಅದರಲ್ಲಿ ಮಜಾ ಭಾರತ, ಗಿಚ್ಚಿಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು (Chillar Manju) ಕೂಡಾ ಸೇರಿಕೊಂಡಿದ್ದಾರೆ.
ಚಿಲ್ಲರ್ ಮಂಜು ತಮ್ಮದೇ ಆದ ಶೈಲಿ, ಮ್ಯಾನರಿಸಂ, ಕಾಮಿಡಿ ಟೈಮಿಂಗ್ ಮೂಲಕ ಜನಮನ ಸೆಳೆದ ಕಲಾವಿದ. ಮಜಾ ಭಾರತ ಶೋನಿಂದ ಬಂದು, ಇತ್ತೀಚೆಗೆ ಗಿಚ್ಚಿಗಿಲಿಗಿಲಿ ಮೂಲಕವೂ ಮಂಜು ಮಜವಾದ ಕಾಮಿಡಿಯ ಕಿಚ್ಚು ಹಚ್ಚಿದ್ದಾರೆ. ಅಂಥಾ ಕಲಾವಿದ ಕೆರೆಬೇಟೆಯಲ್ಲೊಂದು ಪಾತ್ರ ನಿರ್ವಹಿಸಿದ್ದಾರೆಂದರೆ ಸಹಜವಾಗಿಯೇ ಅದರತ್ತ ಕುತೂಹಲ ಮೂಡಿಕೊಳ್ಳುತ್ತದೆ. ಈ ಸಿನಿಮಾ ಚಿತ್ರೀಕರಣ ಮತ್ತು ತಮ್ಮ ಪಾತ್ರದ ಸುತ್ತಲಿನ ಒಂದಷ್ಟು ವಿವರಗಳನ್ನು ಖುದ್ದು ಚಿಲ್ಲರ್ ಮಂಜು ಹಂಚಿಕೊಂಡಿದ್ದಾರೆ.
ಇದೀಗ ಕಾಮಿಡಿ ಶೋಗಳ ಪ್ರಭೆಯಲ್ಲಿಯೇ ಚಿಲ್ಲರ್ ಮಮಂಜು ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂಥಾ ಕಾಮಿಡಿ ಕಾರ್ಯಕ್ರಮಗಳ ದೆಸೆಯಿಂದಲೇ ಅವರಿಗೆ ಕೆರೆಬೇಟೆಯಲ್ಲೊಂದು ಪಾತ್ರವಾಗುವ ಅವಕಾಶ ಕೂಡಿ ಬಂದಿದೆ. ಒಟ್ಟಾರೆ ಕಥೆ, ತಮ್ಮ ಪಾತ್ರದ ವಿವರಗಳನ್ನು ಕೇಳಿ ಖುಷಿಯಾಗಿ ಒಪ್ಪಿಕೊಂಡಿದ್ದ ಚಿಲ್ಲರ್, ಕೆರೆಬೇಟೆ ಅಖಾಡದಲ್ಲಿನ ಪ್ರತೀ ಕ್ಷಣಗಳನ್ನೂ ಸಂಭ್ರಮಿಸಿದ್ದಾರಂತೆ. ಅಂದಹಾಗೆ, ಇಲ್ಲಿ ಹಾಲ ಎಂಬ ಪಾತ್ರವನ್ನು ಚಿಲ್ಲರ್ ನಿರ್ವಹಿಸಿದ್ದಾರೆ. ಅದು ಸದಾ ಕಾಲವೂ ನಾಯಕನ ಜೊತೆಗಿರುವ ಪಾತ್ರ. ಮೂಲರ್ತ ಹಾನಗಲ್ ನವರಾದ ಚಿಲ್ಲರ್ ಮಂಜುಗೆ ಮಲೆನಾಡಿನ ಒಂದಷ್ಟು ಸಂಪ್ರದಾಯ, ಆಚರಣೆಗಳು ಪರಿಚಿತವಾಗಿದ್ದವು. ಇದೀಗ ಕೆರೆಬೇಟೆಯ ಮೂಲಕ ಮಲೆನಾಡು ಶೈಲಿಯ ಪಾತ್ರವಾದ ತುಂಬು ಸಂಭ್ರಮ ಅವರಲ್ಲಿದೆ.
ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.