ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಅತೀವೃಷ್ಟಿ ಉಂಟಾಗಿದ್ದರೆ ಇನ್ನೊಂದೆಡೆ ಅನಾವೃಷ್ಟಿ ಎದುರಾಗಿದೆ. ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮಳೆಗೆ ಪ್ರವಾಹ ಉಂಟಾಗಿದೆ. ಆದರೆ ರಾಜ್ಯದ ಕೆಲವೆಡೆ ಯಾಕೋ ಮಳೆರಾಯನ ಸುಳಿವೇ ಇಲ್ಲದಂತಾಗಿದೆ. ಹೀಗಾಗಿ ಮಳೆರಾಯ ಕೃಪೆ ತೋರಲೆಂದು ನೆಲಮಂಗಲದಲ್ಲಿ ಪುಟಾಣಿ ಮಕ್ಕಳು ದೇವರ ಮೊರೆ ಹೋಗಿದ್ದಾರೆ.
ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಮಳೆಯಿಂದ ರೈತರ ಬೆಳೆಗಳು ಜಲಾವೃಗೊಂಡಿದ್ದರೆ, ಇನ್ನೊಂದೆಡೆ ಮಳೆಯಿಲ್ಲದೆ ಬೆಳೆಗಳು ನಾಶವಾಗುತ್ತಿದೆ ಎಂದು ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮಳೆಗಾಗಿ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದಲ್ಲಿ ಮಕ್ಕಳ ಗುಂಪೊಂದು ಸೇರಿಕೊಂಡು ಮಳೆರಾಯನ ಮೂರ್ತಿಯನ್ನು ತಲೆಮೇಲೆ ಹೊತ್ತು, ಮನೆ ಮನೆಗೆ ತೆರಳಿ ಮಳೆರಾಯನಿಗೆ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ.
Advertisement
Advertisement
ಹಳೆಯ ಜಾನಪದ ಶೈಲಿಯಲ್ಲಿ ಮಕ್ಕಳು ಮಳೆರಾಯನಿಗೆ ತಮ್ಮ ಊರಿಗೆ ಬಾ ಎಂದು ಪ್ರಾರ್ಥಿಸುತ್ತಿದ್ದಾರೆ. ಪುಟಾಣಿಗಳ ಕಾರ್ಯಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದು, ಮನೆ ಮನೆಯಲ್ಲಿ ಮಳೆರಾಯ ಮೂರ್ತಿಗೆ ಕುಂಕುಮ, ಅರಿಶಿಣ ಹಚ್ಚಿ, ಅಗರಬತ್ತಿ ಬೆಳಗಿ, ಮಳೆರಾಯನ ಹೊತ್ತವರಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.