ಹಾಸನ: ಸಕಲೇಶಪುರದಲ್ಲಿ (Sakleshapura) ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಬೆಂಗಳೂರಿನಲ್ಲಿ (Bengaluru) ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶರತ್ (16), ಧನಂಜಯ್ (16), ಮುರುಳಿ (16) ಮೂವರು ಶಾಲೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದವರು, ಮರಳಿ ಮನೆಗೆ ಬಂದಿರಲಿಲ್ಲ. ಬುಧವಾರ ಎಲ್ಲೆಡೆ ಹುಡುಕಾಡಿದ್ದ ಪೋಷಕರು ಆ ದಿನ ರಾತ್ರಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರು.ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಸೆಹ್ವಾಗ್ – ಆರತಿ ದಾಂಪತ್ಯದಲ್ಲಿ ಬಿರುಕು – ಶೀಘ್ರವೇ ಡಿವೋರ್ಸ್?
ಮೂವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಗುರುವಾರ ಮೈಸೂರಿಗೆ ತೆರಳಿದ್ದ ಪೊಲೀಸರು ಹಲವೆಡೆ ಹುಡುಕಾಡಿದ್ದರು. ಆದರೆ ಮೂವರು ಬಾಲಕರು ಪೊಲೀಸರಿಗೆ ಸಿಗದೆ ಮೈಸೂರಿನಿಂದ ಬೆಂಗಳೂರಿಗೆ ತೆರಳಿದ್ದರು. ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಬೆಂಗಳೂರಿಗೆ ತೆರಳಿದ ಪೊಲೀಸರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಅವರ ಸಂಬಂಧಿಕರ ಮನೆಯಲ್ಲಿರುವುದು ಗೊತ್ತಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮ ಮಕ್ಕಳು ಪತ್ತೆಯಾಗಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಚಾರಣೆಯ ಬಳಿಕ ಶಾಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು, ಬುಧವಾರ ಇಂಗ್ಲೀಷ್ ಪರೀಕ್ಷೆಯಿತ್ತು. ಅದಕ್ಕೆ ಹೆದರಿ ವಿದ್ಯಾರ್ಥಿಗಳು ಮನೆಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ.
ಘಟನೆ ಏನು?
ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಮೂವರು ವಿದ್ಯಾರ್ಥಿಗಳು ಕುನಿಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ 7:30ಕ್ಕೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಮೂವರು ಶಾಲೆಗೆ ಬಾರದ ಹಿನ್ನೆಲೆ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.ಇದನ್ನೂ ಓದಿ: ದಿನ ಭವಿಷ್ಯ 24-01-2025