ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜಿಲ್ಲೆಯ ಸಿಂಧನೂರಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಕೂಲಿಕಾರ್ಮಿಕ ಮಹಿಳೆ ಗಂಗಮ್ಮಳ ಇಬ್ಬರು ಮಕ್ಕಳು ಈಗ ದಿಕ್ಕುಕಾಣದ ತಬ್ಬಲಿಗಳಾಗಿದ್ದಾರೆ.
ಮಕ್ಕಳಾದ ಮಂಜುನಾಥ್ ಹಾಗೂ ಪ್ರೀತಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಬೆಂಗಳೂರಿನಿಂದ ಬರುವಾಗ ಬಳ್ಳಾರಿಯಲ್ಲಿ ಅನಾರೋಗ್ಯದಿಂದ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಗಂಗಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಳು. ಬೆಂಗಳೂರಿನ ಕೆಂಗೇರಿಯ ಗ್ಲೋಬಲ್ ವಿಲೇಜ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಂಗಮ್ಮಳಿಗೆ ಅಪಾರ್ಟ್ ಮೆಂಟ್ ಮಾಲೀಕರು ಯಾವುದೇ ಸಹಾಯ ಮಾಡಿಲ್ಲ. ಮೃತಳ ಪತಿ ಮಲ್ಲಿಕಾರ್ಜುನ ನಿರುದ್ಯೋಗಿಯಾಗಿದ್ದು, ಈವರೆಗೂ ಮಕ್ಕಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಮಕ್ಕಳು ತಾಯಿಯ ತವರು ಮನೆ ಸಿಂಧನೂರಿನ ಸಾಸಲಮರಿ ಗ್ರಾಮದಲ್ಲಿದ್ದಾರೆ.
Advertisement
Advertisement
ಅಜ್ಜಿ ಮನೆಯಲ್ಲೂ ದುಡಿಯುವವರು ಇಲ್ಲದೆ, ಮಕ್ಕಳನ್ನ ಸಾಕುವುದು ಅಜ್ಜಿಗೂ ಕಷ್ಟದ ಕೆಲಸವಾಗಿದೆ. ತಾಯಿಯಿಲ್ಲದೆ ತಬ್ಬಲಿಗಳಾಗಿರುವ ಮಕ್ಕಳ ಮುಂದಿನ ಭವಿಷ್ಯ ಹಾಗೂ ಸದ್ಯ ಪರಿಸ್ಥಿತಿ ಶೋಚನೀಯವಾಗಿದೆ. ಸಿಂಧನೂರಿನಲ್ಲಿ ಪುಟ್ಟ ಮನೆಯೊಂದು ಬಿಟ್ಟರೆ ಕುಟುಂಬಕ್ಕೆ ಆಧಾರವೇನು ಇಲ್ಲ.
Advertisement
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿದ್ದ ತಾಯಿ ಮೃತಪಟ್ಟಿರುವುದರಿಂದ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ತಾಲೂಕು ಆಡಳಿತ ಮಕ್ಕಳ ಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಮಕ್ಕಳ ಕಷ್ಟಕ್ಕೆ ಸ್ಪಂದಿಸಿದರೆ ಅವರ ಬಾಳಿಗೆ ಬೆಳಕಾಗಲಿದೆ.