– ಕೃತ್ಯಕ್ಕೆ ಸಹಕರಿಸಿದ್ದ ತಂಗಿ, ಆಕೆಯ ಪತಿ ವಶಕ್ಕೆ
– ಕೂಲಿ ಕಾರ್ಮಿಕರ ಮಕ್ಕಳೇ ಟಾರ್ಗೆಟ್
ಬೆಂಗಳೂರು: ಮೂರುವರೆ ವರ್ಷದ ಮಗುವನ್ನು ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಲೋಕೇಶ್ (40) ಬಂಧಿತ ಆರೋಪಿ. ಡಿಸೋಜಾನಗರದ ನಿವಾಸಿ, ಕೂಲಿ ಕಾರ್ಮಿಕ ದಂಪತಿ ಚೆನ್ನಪ್ಪ ಹಾಗೂ ದೇವಮ್ಮ ಅವರ ಮೂರುವರೆ ವರ್ಷದ ಮಗುವನ್ನು ಆರೋಪಿ ಲೋಕೇಶ್ 2019ರ ಮಾರ್ಚ್ 14ರಂದು ಮಗುವನ್ನು ಕದ್ದೊಯ್ದಿದ್ದ. ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.
Advertisement
Advertisement
ಆರೋಪಿ ಲೋಕೇಶ್ ಕೂಲಿ ಕಾರ್ಮಿಕರ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಪಹರಣಕ್ಕೂ ನಾಲ್ಕು ದಿನ ಮೊದಲೇ ಏರಿಯಾಗೆ ಬಂದು ಮಕ್ಕಳಿಗೆ ತಿಂಡಿ ತಿನಿಸು ಕೊಡಿಸುತ್ತಿದ್ದ. ಈ ವೇಳೆ ಮಕ್ಕಳ ಫೋಟೋವನ್ನು ಕ್ಲಿಕ್ಕಿಸಿಕೊಂಡು, ಅದನ್ನು ಕೊಳ್ಳುವವರಿಗೆ ತೋರಿಸಿ ಯಾವ ಮಗು ಬೇಕು ಎಂದು ನಿಗದಿಪಡಿಸುತ್ತಿದ್ದ. ಮೊದಲೇ ಹಣ ಪಡೆದು ಬಳಿಕ ಮಗುವನ್ನ ಆಟೋದಲ್ಲಿ ಕರೆದುಕೊಂಡ ಹೋಗುತ್ತಿದ್ದ. ಇದೇ ರೀತಿ 2019ರ ಮಾರ್ಚ್ 14ರಂದು ಚೆನ್ನಪ್ಪ ಹಾಗೂ ದೇವಮ್ಮ ದಂಪತಿಯ ಮಗುವನ್ನು ಲೋಕೇಶ್ ಅಪಹರಿಸಿದ್ದ. ಆ ಮಗುವನ್ನು ರೇಣುಕಾ ಎಂಬಾಕೆಗೆ ಮಾರಾಟ ಮಾಡಲು ಸಿದ್ಧತೆ ನೆಡೆಸಿದ್ದ.
Advertisement
ಮಗು ಕಾಣೆಯಾದ ಸಂಬಂಧ ಚೆನ್ನಪ್ಪ ಹಾಗೂ ದೇವಮ್ಮ ದಂಪತಿಯ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಡಿಸೋಜಾನಗರದಿಂದ ಲೋಕೇಶ್ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಟೋ ನಂಬರ್ ಆಧರಿಸಿ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು.
Advertisement
ಲೋಕೇಶ್ ಅಪಹರಿಸಿದ್ದ ಮಗುವನ್ನು ತಂಗಿಯ ಮನೆಯಲ್ಲಿ ಇರಿಸಿದ್ದ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಿಡಿಸಿದ್ದರು. ಈ ವೇಳೆ ಮಗು ತಂಗಿಯ ಮನೆಯಲ್ಲಿ ಇರುವುದಾಗಿ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಪೊಲೀಸರು ಕೃತ್ಯಕ್ಕೆ ಸಹಕರಿಸಿದ್ದ ಲೋಕೇಶ್ ತಂಗಿ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು, ಮಗುವನ್ನು ರಕ್ಷಿಸಿದ್ದಾರೆ.
ಆರೋಪಿ ಲೊಕೇಶ್ ವಿರುದ್ಧ ಮದ್ದೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಬೆಂಗಳೂರಿನ ರಾಜಗೋಪಾಲನಗರ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವು ಪ್ರಕರಣ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಸರಗಳ್ಳತನ ಪ್ರಕರಣಗಳಿವೆ.