ಚಾಮರಾಜನಗರ: ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟು ತಾಯಿ ಕಣ್ಣೀರಿಟ್ಟಿದ್ದಾರೆ. ಅಪರಿಚಿತ ಮಹಿಳೆ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಎರಡೂವರೆ ವರ್ಷದ ಮಗುವನ್ನು ಅಪರಿಚಿತ ಮಹಿಳೆ ಎತ್ತಿಕೊಂಡು ಪರಾರಿಯಾಗಿದ್ದಾಳೆ. ರಾಮನಗರ ಜಿಲ್ಲೆಯ ಅನಿತಾ (26) ಎಂಬಾಕೆಯ ಮಗು ಕಾಣೆಯಾಗಿದೆ.
ಮನೆಯರಿಗೆ ಹೇಳದೆ ಅನಿತಾ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಅಪರಿಚಿತ ಮಹಿಳೆಯ ಪರಿಚಯವಾಗಿದೆ. ಆಕೆಯ ಜೊತೆಗೆ ಚಾಮರಾಜನಗರಕ್ಕೆ ಅನಿತಾ ಬಂದಿದ್ದರು. ಮಗುವನ್ನು ಕೊಡು ಭಿಕ್ಷೆ ಬೇಡಿಕೊಂಡು ಬರುತ್ತೇನೆಂದು ಅಪರಿಚಿತ ಮಹಿಳೆ ಕೇಳಿದ್ದಾಳೆ. ಅದಕ್ಕೆ ತಾಯಿ ಅನಿತಾ ಮಗುವನ್ನು ಕೊಟ್ಟಿದ್ದಾರೆ.
- Advertisement
ಮಗುವನ್ನು ಕರೆದೊಯ್ದಿದ್ದ ಅಪರಿಚಿತ ಮಹಿಳೆ ವಾಪಸ್ ಬಾರದೆ ಪರಾರಿಯಾಗಿದ್ದಾಳೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಎತ್ತಿಕೊಂಡು ಮಹಿಳೆ ಭಿಕ್ಷೆ ಬೇಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.