ಮುಂಬೈ: ಮಹಿಳೆಯೊಬ್ಬಳು ತಾಯಿಗಾಗಿ ಕಾಯುತ್ತಿದ್ದ 12ರ ಅಪ್ರಾಪ್ತ ಬಾಲಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ.
ಈ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದು, ಸದ್ಯಕ್ಕೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ?
ಅಪ್ರಾಪ್ತ ಬಾಲಕನ ಪೋಷಕರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ತಾಯಿ ಬಾಂದ್ರಾದಲ್ಲಿ ಅವರ ತಂದೆ-ತಾಯಿ ಜೊತೆ ಇದ್ದರು. ಬಾಲಕ ತನ್ನ ತಂದೆ ಜೊತೆ ವಾಸವಾಗಿದ್ದನು. ಭಾನುವಾರ ರಜೆ ಇದ್ದ ಕಾರಣ ಬಾಲಕ ತನ್ನ ತಾಯಿಯನ್ನು ಭೇಟಿ ಮಾಡಲು ಬಾಂದ್ರಾಗೆ ಬಂದಿದ್ದಾನೆ. ಆದರೆ ತಾಯಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಪಕ್ಕದ ಮನೆಯ 45 ವರ್ಷದ ಮಹಿಳೆ ಬಂದು ನಿನ್ನ ತಾಯಿ ಬರುವವರೆಗೂ ನಮ್ಮ ಮನೆಯಲ್ಲಿ ಕಾಯುತ್ತಿರು ಎಂದು ಹೇಳಿ ಬಾಲಕನನ್ನು ಕರೆದುಕೊಂಡು ಹೋಗಿದ್ದಾಳೆ.
ಬಾಲಕನ್ನು ಮನೆಗೆ ಕರೆದುಕೊಂಡು ಹೋಗಿದ್ದ ಮಹಿಳೆ ಈ ಸಮಯವನ್ನು ದುರುಪಯೋಗ ಪಡಿಸಿಕೊಂಡು ಬಾಲಕನ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ವೇಳೆ ಬಾಲಕ ಮಹಿಳೆಗೆ ವಿರೋಧಿಸಿದ್ದಾನೆ. ಆದರೂ ಮಹಿಳೆ ಬಾಲಕನನ್ನು ಬೆದರಿಸಿ ಆತನ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾಳೆ.
ಸ್ವಲ್ಪ ಸಮಯದ ನಂತರ ಬಾಲಕನ ತಂದೆ ಮಗನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಆಗ ಮಗ ಬೆದರಿದ್ದು, ಮೌನವಾಗಿ ಕುಳಿತ್ತಿದ್ದನ್ನು ಗಮನಿಸಿ ಪ್ರಶ್ನೆ ಮಾಡಿದ್ದಾರೆ. ಆದರೆ ಬಾಲಕ ತಂದೆಯ ಯಾವುದೇ ಪ್ರಶ್ನೆಗೆ ಉತ್ತರಿಸದೇ ಮೌನವಾಗಿ ಕುಳಿತಿದ್ದನು. ಆದರೂ ತಂದೆ ಮತ್ತೆ ಮತ್ತೆ ಪ್ರಶ್ನೆ ಕೇಳಿದಾಗ ಮಗ ನಡೆದ ಘಟನೆಯ ಬಗ್ಗೆ ಹೇಳಿದ್ದಾನೆ.
ವಿಷಯ ತಿಳಿದ ತಂದೆ ತಕ್ಷಣ ಮಗನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಈ ಕುರಿತು ಪೋಕ್ಸೋ ಕಾಯ್ಡೆಯಡಿ ದೂರು ದಾಖಲಿಸಿಕೊಂಡಿದ್ದು, ಆರೋಪಿ ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv