ಬಾಗಲಕೋಟೆ: ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಮೃತಪಟ್ಟು, ತಾಯಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿಯಲ್ಲಿ ನಡೆದಿದೆ.
ಅಚಲ ಬುಜಬಲಿ ತಿಮ್ಮಣ್ಣವರ ಮೃತ ಬಾಲಕ. ತಮದಡ್ಡಿ ಗ್ರಾಮ ಪ್ರವಾಹಕ್ಕೆ ಸಿಲುಕಿತ್ತು. ಹೀಗಾಗಿ ಮಣ್ಣಿನ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮಗುವಿನ ತಾಯಿ ಅಕ್ಷತಾ ಬುಜಬಲಿ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ರಾತ್ರಿ ಮನೆಯಲ್ಲಿ ನಾಲ್ವರು ಮಲಗಿದ್ದರು. ಬಳಿಕ ಇಂದು ಬೆಳಗ್ಗಿನ ನ ಜಾವ ಸುಮಾರು ನಾಲ್ಕು ಗಂಟೆಗೆ ಇಬ್ಬರು ಎದ್ದು ಹೊರಗಡೆ ಬಂದಿದ್ದರು. ಆದರೆ ತಾಯಿ, ಮಗು ಇನ್ನೂ ಮಲಗಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮಗು ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿದೆ.
ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.