Chamarajanagar
16ರ ಬಾಲಕಿಗೆ ಬಾಲ್ಯ ವಿವಾಹ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.
ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ. ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.
ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
