Connect with us

Automobile

2019ರ ಜುಲೈ ತಿಂಗಳಿನಿಂದ ಕಾರುಗಳಲ್ಲಿ ಚೈಲ್ಡ್ ಲಾಕ್ ಇರಲ್ಲ!

Published

on

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ 2019ರ ಜುಲೈ ತಿಂಗಳಿಂದ ಎಲ್ಲಾ ವಾಣಿಜ್ಯ ಬಳಕೆಯ ಪ್ರಯಾಣಿಕರ ವಾಹನಗಳಲ್ಲಿರುವ ಚೈಲ್ಡ್ ಲಾಕ್ ತೆಗೆಯುವಂತೆ ವಾಹನ ಉತ್ಪಾದಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, 2019ರ ಜುಲೈ ತಿಂಗಳಿಂದ ಎಂ 1 ವಿಭಾಗದಲ್ಲಿ ಬರುವ ವಾಣಿಜ್ಯ ಬಳಕೆಯ ಎಂಟು ಆಸನಗಳನ್ನು ಒಳಗೊಂಡಿರುವ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿರುವ ‘ಚೈಲ್ಡ್ ಲಾಕಿಂಗ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ತೆಗೆದು ಹಾಕಬೇಕು. ಈ ವ್ಯವಸ್ಥೆ ಉತ್ತಮವಾಗಿದ್ದರೂ, ಕಾರಿನಲ್ಲಿ ಇವುಗಳನ್ನು ಲಾಕ್ ಮಾಡಿ, ಅಪರಾಧ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ ವಿಶೇಷವಾಗಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವಾಗ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದ್ದಾರೆ.

ಮಾಹಿತಿಗಳ ಪ್ರಕಾರ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸೇಫ್ಟಿ ವ್ಯವಸ್ಥೆಯನ್ನು ತೆಗೆದು ಹಾಕುವ ಬಗ್ಗೆ ರಸ್ತೆ ಸಾರಿಗೆ ಇಲಾಖೆ ಕಳೆದ ಒಂದು ವರ್ಷದಿಂದ ಚರ್ಚೆ ನಡೆಸುತ್ತಾ ಬಂದಿತ್ತು. ಅಲ್ಲದೇ ಈ ಲಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಕಾರುಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಈ ಲಾಕಿಂಗ್ ವ್ಯವಸ್ಥೆ ಉಪಯೋಗಕ್ಕಿಂತ ಇದರ ದುರುಪಯೋಗವೇ ಹೆಚ್ಚಾಗಿತ್ತು. ಅಲ್ಲದೇ 2017ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನೊಬ್ಬ ಚೈಲ್ಡ್ ಲಾಕ್ ಮಾಡಿ, ಮಹಿಳಾ ಪ್ರಯಾಣಿಕರನ್ನು ಕ್ಯಾಬ್ ನಲ್ಲೇ ಕೂಡಿ ಹಾಕಿ, ದೌರ್ಜನ್ಯ ಎಸಗಿದ್ದ. ದುರುಪಯೋಗ ಆಗುತ್ತಿದ್ದಂತೆ ಎಲ್ಲಾ ವಾಣಿಜ್ಯ ಬಳಕೆಯ ಕಾರುಗಳನ್ನು ಉತ್ಪಾದಿಸುವ ಸಂಸ್ಥೆಗಳಿಗೆ ತಮ್ಮ ತಮ್ಮ ಕಾರುಗಳಲ್ಲಿರುವ ಚೈಲ್ಡ್ ಲಾಕಿಂಗ್ ವ್ಯವಸ್ಥೆಯನ್ನು ತೆಗೆದುಹಾಕಲು ಆದೇಶಿಸಿದೆ.

ಯಾವುದೇ ಕಾರುಗಳಲ್ಲಿ ಚಾಲಕನ ಆಸನವನ್ನು ಬಿಟ್ಟು ಒಂದರಿಂದ ಎಂಟು ಆಸನಗಳನ್ನು ಹೊಂದಿರುವ ಎಲ್ಲಾ ಮಾದರಿ ಪ್ರಯಾಣಿಕರ ವಾಣಿಜ್ಯ ಬಳಕೆಯ ವಾಹನಗಳು ಎಂ 1 ವಿಭಾಗದಲ್ಲಿ ಬರುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *