ಚಿಕ್ಕೋಡಿ: ರಸ್ತೆ ಉಬ್ಬು ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಸ್ನೇಹಿತನ ಶವವನ್ನು ಪೊದೆಗೆ ಎಸೆದಿದ್ದ ಚಾಲಾಕಿ ಚಾಲಕ ಈಗ ಪೋಲಿಸರ ಅತಿಥಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ನಿವಾಸಿ ರಮೇಶ ಕುಗಟೋಳಿ ಎಂಬ ಆರೋಪಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.
Advertisement
Advertisement
ನಂತರ ಬಾಬು ಪೋಷಕರು ತಮ್ಮ ಮಗ ಒಂದು ವಾರವಾದರೂ ಮನೆಗೆ ಬರದಿದ್ದನ್ನು ಗಮನಿಸಿ ಹುಕ್ಕೇರಿ ಪೊಲೀಸರಿಗೆ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದಾಗ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅನಾಥ ಶವ ಸಿಕ್ಕಿರುವ ಕುರಿತು ಪ್ರಕರಣ ದಾಖಾಲಾಗಿತ್ತು. ತಕ್ಷಣ ಯಮಕನಮರಡಿ ಪೊಲೀಸರು ಶವದ ಕುರಿತು ಬಾಬು ಪೋಷಕರಿಗೆ ಮಾಹಿತಿ ನೀಡಿದಾಗ ಅದು ಬಾಬು ಶವ ಎಂದು ಖಚಿತವಾಗಿತ್ತು.
Advertisement
ಜನವರಿ 7ನೇ ತಾರೀಕು ಯಮಕನಮರಡಿ ಪೊಲೀಸರು ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನೇತೃತ್ವದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಸಿದ ಕೇವಲ 2 ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಮತ್ತು ಬಾಬು ಇಬ್ಬರೂ ಸಹ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪೊಲೀಸ್ ತನಿಖೆ ನಡೆಸಿ ಪ್ರಕರಣ ಬೇಧಿಸಿದ ಯಮಕನಮರಡಿ ಪಿ.ಎಸ್.ಐ ರಮೇಶ ಪಾಟೀಲ, ಹುಕ್ಕೇರಿ ಪಿ.ಎಸ್.ಐ ಶಿವಾನಂದ ಗುಡಗನಟ್ಟಿ, ಸಿಬ್ಬಂದಿಗಳಾದ ಎಸ್.ಎಮ್ ಚಿಕ್ಕಣ್ಣವರ, ಆನಂದ ಜೈನಾಪೂರ, ವಿಠಲ ನಾಯಕ, ಬಿ.ವಿ ನೇರಲಿ, ಏಲ್ ವೈ ಖಿಲಾರಾಗಿ, ಆರ್ ಆರ್ ಗಿಡ್ಡಪ್ಪಗೋಳ, ಎಸ್ ಎ ಶೇಖ ಸೇರಿದಂತೆ ಹಲವರು ಭಾಗಿಯಾಗಿದ್ದು ತನಿಖಾ ತಂಡಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.