– ಅಗಸ್ಟ್ 9 ರಂದು ಕೊಚ್ಚಿ ಹೋಗಿತ್ತು ರಿಕ್ಷಾ
– 6 ಜನರನ್ನು ಕೂಡಲೇ ಇಳಿಸಿ ಪ್ರಾಣ ಉಳಿಸಿದ್ದ ಉಮೇಶ್
– ಪೇಪರ್ ದೋಣಿಯಂತೆ ನೀರಿನಲ್ಲಿ ಹೋಗಿತ್ತು
ಚಿಕ್ಕಮಗಳೂರು: ಜೂನ್, ಜುಲೈ, ಅಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಅಂದು ಕೊಚ್ಚಿ ಹೋಗಿದ್ದ ಆಟೋ ನಾಲ್ಕು ತಿಂಗಳ ಬಳಿಕ ಪತ್ತೆಯಾಗಿದೆ.
ಅಗಸ್ಟ್ ತಿಂಗಳು ಅಂದ್ರೆ ಮಲೆನಾಡಿಗರು ಈಗಲೂ ಬೆಚ್ಚಿ ಬೀಳ್ತಾರೆ. ಅಷ್ಟರ ಮಟ್ಟಿಗೆ ರಾಕ್ಷಸನಂತೆ ಮಳೆ ಸುರಿದಿತ್ತು. ಅಗಸ್ಟ್ 9ರಂದು ಬಾಡಿಗೆಗೆ ಜನರನ್ನ ಕೂರಿಸಿಕೊಂಡು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬರುವಾಗ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ರಸ್ತೆ ಬದಿಯ ಮರಗಿಡಗಳು ಎತ್ತರದ ಪ್ರದೇಶದಿಂದ ರಸ್ತೆಗೆ ಬರುತ್ತಿದ್ದಾಗ ಎದುರಿಗೆ ಬಂದ ಆಟೋ ಕೂಡ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆಟೋ ಚಾಲಕ ಉಮೇಶ್ ಕೂಡಲೇ ಎಚ್ಚೆತ್ತು ಆಟೋದಲ್ಲಿದ್ದವರನ್ನ ಕೆಳಗಿಸಿ ಎಲ್ಲರ ಪ್ರಾಣ ಉಳಿಸಿದ್ದರು. ಆದರೆ ಆಟೋವನ್ನ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
Advertisement
ಕೊಟ್ಟಿಗೆಹಾರದಲ್ಲಿ ಮುಗಿಲೆತ್ತರದ ಬೆಟ್ಟಗುಡ್ಡಗಳೇ ಕಳಚಿ ಬಿದ್ದಿತ್ತು. ಭೂಮಿಯು ಬಾಯ್ಬಿಟ್ಟಿತ್ತು. ಅಂತಹಾ ಮಳೆಯಲ್ಲಿ ಅಂದು ಕೊಚ್ಚಿ ಹೋಗಿದ್ದ ಆಟೋವನ್ನು ಮಾಲೀಕ ಉಮೇಶ್ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಹುಡುಕುವಷ್ಟು ದಿನ ಹುಡುಕಿ ಉಮೇಶ್ ಕೂಡ ಕೈಚೆಲ್ಲಿದ್ರು. ಜೀವನ ನಿರ್ವಹಣೆಗೆ ಇದ್ದ ಆಟೋ ಮಳೆ ನೀರಿನಲ್ಲಿ ಪೇಪರ್ ದೋಣಿಯಂತೆ ತೇಲಿ ಹೋಗಿದ್ದ ಕಂಡು ಕಣ್ಣೀರಿಟ್ಟಿದ್ದರು. ಆದರೆ ಈಗ ಪತ್ತೆಯಾಗಿರುವ ಆಟೋವಿನ ಅವಶೇಷವನ್ನು ಕಂಡ ಉಮೇಶ್ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
Advertisement
Advertisement
Advertisement
ಅಂದು ಆಟೋದಲ್ಲಿದ್ದವರು ನಾವು ಬದುಕುಳಿದಿದ್ದೇ ಪವಾಡ ಅಂತಾರೆ. ಯಾಕಂದ್ರೆ, ರಸ್ತೆಯ ಒಂದು ಬದಿಯಲ್ಲಿ ಎತ್ತರದಿಂದ ಪ್ರವಾಹದಂತೆ ನುಗ್ಗಿ ಬರುತ್ತಿರುವ ನೀರು. ಮತ್ತೊಂದೆಡೆ ಆಳವಾದ ಪ್ರದೇಶ. ಅಂದು ನಾವು ಆಟೋದಲ್ಲೇ ಇದ್ದಿದ್ರೆ ಇಂದು ಫೋಟೋದಲ್ಲಿ ನಾವು ಇರಬೇಕಿತ್ತು ಅಂತಾರೆ ಆಟೋದಲ್ಲಿದ್ದ ಸ್ಥಳೀಯರು. ನಾವು ಬದುಕಿದ್ದೆ ಪವಾಡ, ಉಮೇಶ್ ಅವರು ಕೂಡಲೇ ನಮ್ಮನ್ನ ಆಟೋದಿಂದ ಇಳಿಸದಿದ್ದರೆ ಆರು ಜನರಲ್ಲಿ ಯಾರೊಬ್ಬರು ಉಳಿಯುತ್ತಿರಲಿಲ್ಲ ಆ ದೃಶ್ಯವನ್ನ ನೆನೆದು ಇಂದಿಗೂ ಭಯಭೀತರಾಗ್ತಾರೆ.
ಅಂದು ಕೊಚ್ಚಿ ಹೋಗಿದ್ದ ಆಟೋ ಇಂದು ಪತ್ತೆಯಾಗಿದ್ದರೂ ಕೂಡ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ತೂಕದ ಲೆಕ್ಕದಲ್ಲಿ ಗುಜರಿಗೆ ಮಾರುವ ಸ್ಥಿತಿ ತಲುಪಿದೆ. ಹಲವು ವರ್ಷಗಳ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸಿದ್ದ ತನ್ನ ಬದುಕಿನ ಸಾರಥಿ ಸ್ಥಿತಿ ಕಂಡು ಉಮೇಶ್ ಮಮ್ಮುಲು ಮರುಗುತ್ತಿದ್ದಾರೆ. ಎತ್ತರದ ಪ್ರದೇಶದಿಂದ ಬಿದ್ದ ಆಟೋ ಬೃಹತ್ ಕಲ್ಲು-ಬಂಡೆಗಳ ಮಧ್ಯೆ ಸಿಲುಕಿ ಪುಡಿ-ಪುಡಿಯಾಗಿದೆ. ರಿಕ್ಷಾದ ಅವಶೇಷಗಳ ಬಳಿ ನಿಂತು ಉಮೇಶ್ ಭವಿಷ್ಯದ ದಾರಿ ನೆನೆದು ಕಣ್ಣೀರಿಡ್ತಿದ್ದಾರೆ.
ಈ ವರ್ಷದ ಮಲೆನಾಡ ಮಳೆಗೆ ನಮಗೆ ಭವಿಷ್ಯವಿದ್ಯಾ ಅಂತ ಮಲೆನಾಡಿಗರೇ ಆತಂಕಕ್ಕಿಡಾಗಿದ್ರು. ಅದೆಷ್ಟೋ ಜೀವಗಳು ಜಲರಾಕ್ಷಸನ ಅಬ್ಬರಕ್ಕೆ ಮಣ್ಣಲ್ಲಿ ಮಣ್ಣಾಗಿ ಉಸಿರು ಚೆಲ್ಲಿದ್ವು. ಆದ್ರೆ, ಉಮೇಶ್‍ಗೆ ಜೀವನ ನೀಡಿದ್ದ ನಿರ್ಜಿವಿ ಆಟೋ ವರುಣನ ಮುಂದೆ ಮಂಡಿಯೂರಿತ್ತು. ಪ್ರಕೃತಿ ವಿಕೋಪಕ್ಕೆ ವಿಮೆ ಕೂಡ ಸಿಗದ ಕಾರಣ ಉಮೇಶ್‍ಗೆ ಅತ್ತ ಹಣವೂ ಇಲ್ಲ. ಇತ್ತ ಆಟೋವು ಇಲ್ಲ ಕೊನೆಗೆ ಜೀವನವೂ ಇಲ್ಲ ಎಂಬಂತಾಗಿದೆ. ಮೂರು ತಿಂಗಳಿಂದ ಆಟೋ ಹುಡುಕಿಕೊಂಡು ಕೂಲಿ ಮಾಡ್ತಿದ್ದ ಉಮೇಶ್ ಇಂದು ಮುಂದೆ ಏನ್ ಮಾಡೋದೆಂದು ತಲೆ ಮೇಲೆ ಕೈಹೊದ್ದು ಕೂತಿದ್ದಾರೆ.
ಆಟೋ ಓಡಿಸಿಕೊಂಡೇ ಜೀವನ ರೂಪಿಸಿಕೊಂಡಿದ್ದ ಉಮೇಶ್ ಕುಟುಂಬ ಇಂದು ಬೀದಿಗೆ ಬಿದ್ದಿದೆ. ಸಾಲದ ಶೂಲವೂ ಉಮೇಶ್‍ರನ್ನ ಕಿತ್ತು ತಿಂತಿದೆ. ಒಂದೆಡೆ ದುಡಿಯಲು ಆಟೋವಿಲ್ಲ. ಕೂಲಿ ಮಾಡಿದ್ರೆ ಬದುಕಲು ಸಾಕಾಗುತ್ತೆ. ಹೆಂಡತಿ ಸಂಘದಲ್ಲಿ ಸಾಲ ಮಾಡಿ ಕೊಡಿಸಿದ್ದ ಆಟೋದ ಸಾಲವನ್ನೂ ಕಟ್ಟಬೇಕು. ಉಮೇಶ್ ದಂಪತಿಗೆ ಈಗ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಇರೋ ಮೂವರು ಮಕ್ಕಳಲ್ಲಿ ಉಮೇಶ್ ಮಕ್ಕಳನ್ನ ಓದಿಸಿಕೊಂಡು ಜೀವನ ಸಾಗಿಸಲಾಗದೇ ಕೆಲ ತಿಂಗಳಿಂದ ಮಕ್ಕಳಿಗೆ ಶಾಲೆಯನ್ನೂ ಬಿಡಿಸಿದ್ದಾರೆ. ಬದುಕಿನ ಮೇಲೆ ವಿಧಿ ಸವಾರಿ ಮಾಡ ಹೊರಟರೇ ಬದುಕು ಯಾವಾಗ, ಹೇಗೆ, ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎನ್ನುವುದಕ್ಕೆ ಈ ಕುಟುಂಬವೇ ಸಾಕ್ಷಿ. ಆದ್ರೆ, ಈತನ ಕಷ್ಟವನ್ನ ಜಿಲ್ಲಾಡಳಿತವೂ ಕೇಳಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕೈಮುಗಿಯುವ ರಾಜಕಾರಣಿಗಳಿಗೆ ನೋವು ತಲುಪಿಲ್ಲ ಎನ್ನುವುದೇ ಬೇಸರದ ಸಂಗತಿ.