– ಒಂದೇ ರೂಮಿನಲ್ಲಿ 1 ರಿಂದ 4ರವರೆಗೆ ಕ್ಲಾಸ್
– ಹೆಡ್ ಮೇಷ್ಟ್ರಿಗೆ ಇಲ್ಲ ಜಾಗ
ಚಿಕ್ಕಮಗಳೂರು: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ ಮಾಡುತ್ತಾರೆ. ನಮ್ ಟೀಚರ್ ಹೇಳೋ ಪಾಠವನ್ನ ಮಾತ್ರ ಕೇಳ್ಬೇಕು. ಬೇರೆಯವ್ರು ಹೇಳೋದ್ನ ಕೇಳಂಗಿಲ್ಲ. ಮಕ್ಕಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ಶಿಕ್ಷಕರು ಪಾಠವನ್ನಂತು ಮಾಡ್ಲೇಬೇಕು. ಇದು ಕಾಫಿನಾಡಿನ ಸರ್ಕಾರಿ ಕನ್ನಡ ಶಾಲೆಯ ಕಥೆ. ಕ್ಲಾಸ್ ರೂಂ ಒಂದೇ. ಪಾಠ ಮಾಡೋ ಶಿಕ್ಷಕರು ನಾಲ್ಕು ಜನ. ಕೇಳೋ ಮಕ್ಕಳು 45. ಎಲ್ಲರೂ ಬೇರೆ-ಬೇರೆ ತರಗತಿಯವ್ರು. ಯಾವ ಶಿಕ್ಷಕರು ಯಾವ ಪಾಠವನ್ನ ಯಾವ ತರಗತಿಯವ್ರಿಗೆ ಮಾಡ್ತಿದ್ದಾರೆ ಅನ್ನೋದು ಮಕ್ಕಳಿಗಲ್ಲ ಶಿಕ್ಷಕರಿಗೆ ಕನ್ಫ್ಯೂಸ್. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಟೀಚರ್ ಪಾಠ ಮಾಡ್ತಾರೆ, ಮಕ್ಕಳು ಅದನ್ನ ಕೇಳ್ತಿದ್ದಾರೆ.
ಕಡೂರು ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 2007ರವರಗೆ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿತ್ತು. ಸರ್ಕಾರ ಈ ಶಾಲೆಯನ್ನು 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮೇಲ್ದರ್ಜೆಗೇರಿಸಿದೆ. ಆದ್ರೆ ಶಾಲೆಗೆ ಕೊಡಬೇಕಾದ ಮೂಲಭೂತ ಸೌಕರ್ಯವನ್ನು ಕೊಟ್ಟೇ ಇಲ್ಲ. ಅಂದು ಇದ್ದ ಐದೇ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಯುತ್ತಿತ್ತು. ಮಳೆ-ಗಾಳಿಗೆ ಎರಡು ಕೊಠಡಿಗಳು ಹಾಳಾಗಿದ್ದು ಅಲ್ಲಿ ಮಕ್ಕಳನ್ನು ಕೂರಿಸ್ತಿಲ್ಲ. ಉಳಿದ ಮೂರು ಕೊಠಡಿಯಲ್ಲಿ ಒಂದರಲ್ಲಿ 1ನೇ ತರಗತಿಯಿಂದ 4ನೇ ತರಗತಿ ಮಕ್ಕಳು. ಮತ್ತೊಂದರಲ್ಲಿ ಐದನೇ ತರಗತಿಯಿಂದ 6 ನೇ ತತರಗತಿ ಮಕ್ಕಳು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏಳನೇ ತರಗತಿ ಮಕ್ಕಳು. ಹೆಡ್ ಮಾಸ್ಟ್ರು ಮೀಟಿಂಗ್ ಅಂದ್ರೆ ಆ ಮಕ್ಕಳು ಹೊರಗೆ ಹೋಗಬೇಕಾಗುತ್ತದೆ. ಇದೇ ರೀತಿ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ.
Advertisement
Advertisement
ಪೂರ್ವ ದಿಕ್ಕಿಗೆ 1ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಪಶ್ಚಿಮಕ್ಕೆ 2ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಉತ್ತರಕ್ಕೆ 3, ದಕ್ಷಿಣಕ್ಕೆ 4ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕರು. ಇಲ್ಲಿ ಒಬ್ಬೊರಿಗೊಬ್ಬುರು ಬೆನ್ ಹಾಕಿಕೊಂಡೇ ಪಾಠ ಕೇಳಬೇಕು. ಇಲ್ಲಿ ಒಂದೇ ಕೊಠಡಿಯೊಳಗೆ ಏಕಕಾಲಕ್ಕೆ ನಾಲ್ಕು ಕ್ಲಾಸ್ ನೆಡೆಯುತ್ತವೆ. ದಯವಿಟ್ಟು ಮೂರು ರೂಂ ಕೊಡಿ ಎಂದು ಮೂರು ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ. ಆದ್ರೆ ಯಾರೂ ಸ್ಪಂದಿಸಿಲ್ಲ. ಎಸ್‍ಡಿಎಂಸಿ. ಸದಸ್ಯರು ಕೊಟ್ಟ ಮನವಿಗಳಿಗೆ ಸಹಿ ಹಾಕಿ-ಹಾಕಿ ಕೈ ನೋವಾಗಿದೆ ಅಷ್ಟು ಮನವಿ ಮಾಡಿದ್ದೀವಿ ಎನ್ನುತ್ತಾರೆ. ಅಧಿಕಾರಿಗಳು ಮನವಿ ಪತ್ರಗಳನ್ನು ಇಸ್ಕೊಂಡ್ರೇ ವಿನಃ ಬಿಲ್ಡಿಂಗ್ ಮಾತ್ರ ಕೊಟ್ಟಿಲ್ಲ.
Advertisement
Advertisement
ಈ ಊರಲ್ಲಿ ಶ್ರೀಮಂತರಿಲ್ಲ. ಇರೋರೆಲ್ಲಾ ಹಿಂದುಳಿದ ವರ್ಗ, ಅಲೆಮಾರಿ ಹಾಗೂ ಯಾದವ ಜನಾಂಗಕ್ಕೆ ಸೇರಿದವರು. ಎಲ್ಲರೂ ಕೂಲಿ ಮಾಡಿಕೊಂಡೆ ಬದುಕ್ತಿರೋರು. ಇವ್ರಿಗೆ ಕಾನ್ವೆಂಟ್‍ಗಳಲ್ಲಿ ಓದಿಸೋ ಶಕ್ತಿಯೂ ಇಲ್ಲ. ಮಕ್ಕಳು ನಮ್ಮಂತಾಗೋದು ಬೇಡ ಎಂದು ಶಾಲೆಗೆ ಕಳಿಸಿ ಕೂಲಿಗೆ ಹೋಗ್ತಿದ್ದಾರೆ. ಆದ್ರೆ ಸರ್ಕಾರ ಉಚಿತ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಕಾಣ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ ಎಂದೇಳೋ ಸರ್ಕಾರ ಉಳಿಯೋಕೆ ಬೇಕಾದ್ದನ್ನು ಮಾಡ್ತಿಲ್ಲ. ಈ ರೀತಿ ಸೌಲಭ್ಯ ಕೊಟ್ರೆ ಮಕ್ಕಳು ಓದು-ಬರಹ ಕಲಿಯೋದಾದ್ರು ಹೇಗೆ? ಇಲ್ಲಿ ಸಮರ್ಪಕವಾದ ಶಿಕ್ಷಕರಿದ್ದಾರೆ. ಮಕ್ಕಳೂ ಇದ್ದಾರೆ. ಆದರೆ ಬಿಲ್ಡಿಂಗ್ ಇಲ್ಲ. ಇದು ಹೀಗೆ ಮುಂದುವರೆದ್ರೆ ನಾಳೆ ಮಕ್ಕಳು ಹೆತ್ತವರ ಜೊತೆ ಕೂಲಿಗೆ ಹೋಗ್ತಾರೆ ಶಾಲೆಗೆ ಬೀಗ ಬೀಳುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಬಿಲ್ಡಿಂಗ್‍ಗಾಗಿ ಸಂಸದೆ ಶೋಭಾ ಕರಂದ್ಲಾಜೆಗೂ ಮನವಿ ಮಾಡಿದ್ದಾರೆ. ಆದರೆ ಅವರು ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂದ್ರಂತೆ. ಶಾಸಕ ಬೆಳ್ಳಿ ಪ್ರಕಾಶ್‍ಗೆ ಮನವಿ ಮಾಡಿದ್ದಾರೆ. ಅವರು ಕೇವಲ ಆಯ್ತು ಎಂದು ಸುಮ್ಮನಾಗಿದ್ದಾರೆ. ಅಧಿಕಾರಿಗಳಿಗೆ ಕೊಟ್ಟ ಮನವಿ ಪತ್ರಗಳಿಗೆ ಇಂದಿಗೂ ಬೆಲೆ ಸಿಕ್ಕಿಲ್ಲ. ಊರಿನ ಜನ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಎಂದು ಹೇಳಿದ್ದಾರೆ. ಆ ಪರ್ವ ಈ ಬಡ ಮಕ್ಕಳ ಶಾಲೆಯಿಂದಲೇ ಆರಂಭವಾಗಲಿ ಅನ್ನೋದು ಸ್ಥಳೀಯರ ಅಶಯವಾಗಿದೆ.