ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಗ್ರಾಹಕರಂತೆ ಹೋಗಿ, ಕಾಡು ಪ್ರಾಣಿಗಳನ್ನು ಬೇಟಿ ಆಡುತ್ತಿದ್ದ ಆರು ಜನರ ತಂಡವನ್ನು ತರೀಕೆರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಭಾನುವಾರ ಮಾಹಿತಿ ದೊರೆತಿದ್ದು, ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.
ಸುಮಾರು ದಿನಗಳಿಂದ ಆರೋಪಿಗಳು ಜಾಲದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಖಚಿತ ಮಾಹಿತಿ ದೊರೆಯಿತು. ಹೀಗಾಗಿ ಗ್ರಾಹಕರಂತೆ ಮಾರುವೇಷ ಹಾಕಿಕೊಂಡು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ತಂಡ ದಾಳಿ ಮಾಡಿದ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪು ಹಂದಿಯ ಚಿಪ್ಪು, 16.5 ಕೆ.ಜಿ. ಜಿಂಕೆಗಳ ಕೊಂಬು ಹಾಗೂ 4.5 ಕೆ.ಜಿ. ಕಾಡು ಕೋಣಗಳ ಕೊಂಬುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಹಿಂದೆ ದೊಡ್ಡ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಬಂಧಿತರು ಕಾಡು ಪ್ರಾಣಿಗಳ ದೇಹದ ಬೆಲೆಬಾಳುವ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಭದ್ರಾ ಹುಲಿ ಅಭಯಾರಣ್ಯ ಸೇರಿದಂತೆ ಮಲೆನಾಡು ಭಾಗದ ಕಾಡುಗಳಲ್ಲಿ ವನ್ಯಜೀವಿಗಳನ್ನ ಭೇಟಿಯಾಡುತ್ತಿದ್ದರು. ಅಲ್ಲದೇ ಅವರ ಬಳಿ ಇನ್ನು ಹೆಚ್ಚಿನ ಪ್ರಾಣಿಗಳ ಚರ್ಮ, ಕೊಂಬು, ಮೂಳೆ, ದಂತಗಳಿವೆ ಎನ್ನುವ ಸಂದೇಹ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಆನೆ ದಂತಗಳನ್ನು ಏನು ಮಾಡುತ್ತಾರೆ?
ಆನೆ ದಂತಗಳನ್ನು ಹಣ ಪಡೆದು ಮಾರಾಟ ಮಾಡುವುದುನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ದಾಳಿ ವೇಳೆ ಸಿಕ್ಕಿದ ಆನೆ ದಂತಗಳನ್ನು ರಕ್ಷಣಾ ಇಲಾಖೆಗೆ ನೀಡುತ್ತದೆ. ಕೆಲವು ದಂತಗಳನ್ನು ಸಂಶೋಧನೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತದೆ. ಯಾರಿಗೂ ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ದಂತಗಳನ್ನು ಸುಡಲಾಗುತ್ತದೆ.