ಚಿಕ್ಕೋಡಿ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕುಡಚಿ ಶಾಸಕ ಪಿ.ರಾಜೀವ್ ನೀಡಿದ್ದಾರೆ. ಶಾಲೆಯ ಬೆಳವಣಿಗೆ ಕಂಡು ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ತನ್ನ ಜೇಬಿನಲ್ಲಿದ್ದ ಎಲ್ಲಾ ಹಣ ನೀಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕುಡಚಿ ಶಾಸಕ ಪಿ ರಾಜೀವ್ ಭೇಟಿ ನೀಡಿದ್ದರು. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಅಭಿವೃದ್ಧಿ ಆಗಿರುವ ಈ ಶಾಲೆಯನ್ನ ಕಂಡು ಸಂತಸಗೊಂಡ ರಾಜೀವ್ ಅವರು ತನ್ನ ಜೇಬಿನಲ್ಲಿದ್ದ 18 ಸಾವಿರ ರೂ. ಅನ್ನು ಶಾಲೆ ಅಭಿವೃದ್ಧಿಗಾಗಿ ಶಿಕ್ಷಕರಿಗೆ ನೀಡಿದರು.
ಇದೇ ವೇಳೆ ಶಾಲೆ ಅನುದಾನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ನಿಡಗುಂದಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಖಾಸಗಿ ಶಾಲೆಗಳಂತೆ ಡಿಜಿಟಲ್ ಕ್ಲಾಸ್ ರೂಮ್ ಹಾಗೂ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಾವಿಣ್ಯರನ್ನಾಗಿ ಮಾಡುತ್ತಿರುವ ಶಾಲಾ ಮುಖ್ಯೋಪಾಧ್ಯಯ ವೀರಣ್ಣಾ ಮಡಿವಾಳರ ಅವರನ್ನ ಶಾಸಕರು ಹಾಡಿ ಹೊಗಳಿದರು. ಜೊತೆಗೆ ನಿಮ್ಮ ಈ ಸಾರ್ಥಕ ಸೇವೆ ಮುಂದುವರಿಯಲಿ ಎಂದು ಆಶಿಸಿದರು.