ಚಿಕ್ಕೋಡಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆಯನ್ನು ರದ್ದು ಮಾಡಿ ಕೊರೊನಾ ವಾರಿಯರ್ಸ್‍ಗೆ ಅನ್ನ ದಾಸೋಹ ಮಾಡಿ ಹುಕ್ಕೇರಿ ಹಿರೇಮಠ ಮಾದರಿಯಾಗಿದೆ.
ಪ್ರತಿ ವರ್ಷ ಏಪ್ರಿಲ್ 24ರಿಂದ ಹುಕ್ಕೇರಿ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರೆ ನಡೆಯಬೇಕಿತ್ತು. ಆದರೆ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿದೆ. ಜಾತ್ರೆ ರದ್ದಾದರೂ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಅನ್ನ ದಾಸೋಹವನ್ನು ಆಯೋಜಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಕೊರೊನಾ ವಾರಿಯರ್ಸ್‍ಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀಗಳು, ಪ್ರತಿ ವರ್ಷ ನಾವು ದೇವರಿಗೆ ನೈವೈದ್ಯ ಮಾಡುತ್ತಿದ್ದೆವು. ಆದರೆ ಈ ಬಾರಿ ದೇವಾಲಯದ ಬಾಗಿಲುಗಳು ಮುಚ್ಚಿ ಹೋಗಿವೆ. ಹೀಗಾಗಿ ಈ ವರ್ಷ ನಡೆದಾಡುವ ದೇವರುಗಳಾದ ಪೊಲೀಸರು, ವೈದ್ಯರು, ಪೌರ ಕಾರ್ಮಿಕರಿಗೆ, ಆಶಾ ಕಾರ್ಯಕರ್ತರಿಗೆ ಅನ್ನ ದಾಸೋಹ ನೀಡಿದ್ದು ಹೆಮ್ಮೆ ಅನಿಸುತ್ತದೆ. ಈ ರೀತಿಯ ಕಠಿಣ ಸಂದರ್ಭದಲ್ಲಿ ಕಾಪಾಡುತ್ತಿರುವ ಇವರೇ ನಿಜವಾದ ದೇವರು. ಇವರೆಲ್ಲರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.