ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಣಕಾಪುರದಲ್ಲಿರೋ ಸರ್ಕಾರಿ ಕನ್ನಡ ಮತ್ತು ಮರಾಠಿ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದೆ. ಕಲಿಕೆಗೆ ಯೋಗ್ಯವಲ್ಲ ಅಂತಾ ನೋಟಿಸ್ ಕೊಟ್ಟ ಮೇಲೂ ಅದೇ ಶಾಲೆಯಲ್ಲಿ ಪಾಠ-ಪ್ರವಚನ ನಡೀತಿದೆ. ಮಕ್ಕಳು ಸಾವನ್ನು ಎದುರು ನೋಡುತ್ತಾ ಪಾಠ ಕೇಳುತ್ತಿದ್ದಾರೆ.
700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿರೋ ಈ ಶಾಲೆ ಶಿಥಿಲಾವಸ್ಥೆ ತಲುಪಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗ ಬೇಕಾದ್ರೂ ಬೀಳಬಹುದು. ಇನ್ನು ಮಳೆ ಗಾಳಿ ಬಂದ್ರಂತೂ ಊರಿನ ಗ್ರಾಮಪಂಚಾಯತ್ ಕಚೇರಿಯ ಕಟ್ಟಡ ಮತ್ತು ದೇವಸ್ಥಾನವೇ ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಶಾಲೆಯಾಗಿದೆ ಅಂತ ಶಿಕ್ಷಕ ಅವಧೂತ ಧನಗರ ತಿಳಿಸಿದ್ದಾರೆ.
Advertisement
Advertisement
ಸುಮಾರು 70 ವರ್ಷಗಳ ಹಿಂದೆ ಗ್ರಾಮಸ್ಥರೇ ಹಣ ಸೇರಿಸಿ ಈ ಶಾಲೆಯನ್ನು ಕಟ್ಟಿದ್ದಾರೆ. ಹಾಗೆ ಕಟ್ಟಿದ ಕಟ್ಟಡಗಳು ಬೀಳೋ ಸ್ಥಿತಿಗೆ ಬಂದಿದೆ. ಈ ಬಗ್ಗೆ ಬೆಳಗಾವಿ ಡಿಸಿ, ಸಚಿವ ರಮೇಶ್ ಜಾರಕಿಹೊಳಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದ 12 ಜನರು ಸೇರಿ ಶಾಲೆಯ ಅಭಿವೃದ್ಧಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋ ಎಚ್ಚರಿಕೆ ನೀಡಿರುವುದಾಗಿ ಎಸ್‍ಡಿಎಂಸಿ ಸದಸ್ಯ ಜಗದೀಶ ಹೇಳಿದ್ದಾರೆ.
Advertisement
Advertisement
ಸರ್ಕಾರಿ ಶಾಲೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಕೊಂಚ ಇತ್ತ ಕಡೆ ಗಮನಹರಿಸಿ ಜೀವ ಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳ ರಕ್ಷಣೆಗೆ ನಿಲ್ಲಲಿ ಎಂಬುವುದೇ ಎಲ್ಲರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv