ಎಲ್ಲದಕ್ಕೂ ತೆಪ್ಪವೇ ಆಧಾರ-ಇದು ಮಲೆನಾಡ ನತದೃಷ್ಟ ಗ್ರಾಮ

Public TV
1 Min Read
CKM Boat Village

ಚಿಕ್ಕಮಗಳೂರು: ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ ಎಂಬ ಪ್ರಶ್ನೆ ಮಲೆನಾಡಿನ ಗ್ರಾಮಸ್ಥರನ್ನು ಸದಾ ಕಾಡುತ್ತಿರುತ್ತೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಈ ಗ್ರಾಮಕ್ಕೆ ಇಂದಿಗೂ ಓಡಾಡೋಕೆ ರಸ್ತೆ ಇಲ್ಲ. ಎಲ್ಲದಕ್ಕೂ ತೆಪ್ಪವೇ ಆಧಾರ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುವುದು ಈ ಗ್ರಾಮಸ್ಥರ ಮಾತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಗ್ಗನಳ್ಳ ಜನಕ್ಕೆ ಇಂದಿಗೂ ಉಕ್ಕಡವೇ ಜೀವಾಳ.

CKM Boat 3

ಮಗುವಿನ ನಾಮಕರಣಕ್ಕೆ, ಸತ್ತೋರ ಅಂತ್ಯ ಸಂಸ್ಕಾರಕ್ಕೆ, ಮಕ್ಕಳು ಶಾಲೆಗೆ ಹೋಗಲು ಎಲ್ಲದಕ್ಕೂ ತೆಪ್ಪವೇ ಆಧಾರ. ತೆಪ್ಪ ಇಲ್ಲದಿದ್ದರೆ ಇವರ ಕೆಲಸಗಳೇ ನಿಂತು ಬಿಡುತ್ತವೆ. ಸುಮಾರು 50-60 ಅಡಿ ಆಳದ ಭದ್ರಾ ನದಿ ಮೇಲೆ ಇವರು 7 ದಶಕಗಳಿಂದ ತೇಲಿಕೊಂಡೇ ಬದುಕುತ್ತಿದ್ದಾರೆ. ದಶಕಗಳಿಂದ ಒಂದೇ ಒಂದು ಸೇತುವೆಗೆ ಜನನಾಯಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

CKM Boat 2

ಮೂಡಿಗೆರೆಯಲ್ಲಿ ವಾರ್ಷಿಕ ದಾಖಲೆ ಮಳೆ ಸುರಿಯುತ್ತೆ. ಮಳೆಗಾಲದಲ್ಲಂತು ಇವರ ಸ್ಥಿತಿ ಕೇಳೋದೇ ಬೇಡ. ಮಳೆಗಾಲದಲ್ಲಿ ಮಕ್ಕಳು ತಿಂಗಳಗಟ್ಟಲೇ ಶಾಲೆಗೆ ಹೋಗಲು ಆಗಲ್ಲ. ಮಳೆ ನಿಲ್ಲೋವರೆಗೂ ಕಗ್ಗನಹಳ್ಳಿ, ಹೊಳಲು, ಇಡ್ಕಣಿ, ಬಿಳಗೂರು ಸೇರಿದಂತೆ ನಾಲ್ಕೈದು ಗ್ರಾಮಗಳ ಗ್ರಾಮಸ್ಥರು ಬಾಹ್ಯ ಜಗತ್ತಿನ ಸಂಪರ್ಕವೇ ಕಳೆದುಕೊಳ್ಳುತ್ತಾರೆ.

CKM Boat 1

ಕಳಸ, ಬಾಳೆಹೊಳೆ, ಹೊರನಾಡು, ಮಾಗುಂಡಿ ಕಡೆಗೆ ಬರಲು ತೆಪ್ಪವನ್ನೇರಿಯೇ ನದಿ ದಾಟಬೇಕು. ಸ್ವಲ್ಪ ಆಯಾ ತಪ್ಪಿದ್ರೂ ಬದುಕಿ ಬರೋ ಯಾವುದೇ ಗ್ಯಾರಂಟಿ ಇಲ್ಲ. ಎರಡು ವರ್ಷದ ಹಿಂದೆ ತೆಪ್ಪ ಹುಟ್ಟು ಹಾಕ್ತಿದ್ದ ಅಂಬಿಗ ಸುಧಾಕರ್ ಭದ್ರೆ ಪಾಲಾಗಿದ್ರು. ಆದರೂ ಯಾರು ಇತ್ತ ತಿರುಗಿಯೂ ನೋಡದಿರೋದು ದುರಂತದಲ್ಲಿ ಮಹಾದುರಂತ. ಚಿಕ್ಕಮಗಳೂರಿನವರೇ ಆದ ಸಿ.ಟಿ. ರವಿ ಅವರು ಸಚಿವರಾಗಿದ್ದಾರೆ. ಇವರಾದ್ರೂ ಕಗ್ಗನಳ್ಳಿ ಜನರ ದಶಕಗಳ ಕಷ್ಟಕ್ಕೆ ಪರಿಹಾರ ಒದಗಿಸುತ್ತಾರಾ ಎಂದು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *