ಚಿಕ್ಕಮಗಳೂರು: ದೋಸ್ತಿ ಸರ್ಕಾರದಲ್ಲಿ ಡಿಸಿಎಂ ಪರಮೇಶ್ವರ್ ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್ ಪಡೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಡಿಸಿಎಂ ಅಶ್ವಥ್ ನಾರಾಯಣ್‍ಗಾಗಿ ಪೊಲೀಸರು ಒಂದಲ್ಲ ಎರಡಲ್ಲ ನಾಲ್ಕು ಬಾರೀ ಝಿರೋ ಟ್ರಾಫಿಕ್ ಸೌಲಭ್ಯ ನೀಡಿದ್ದು, ಬಿಸಿಲಿನಲ್ಲಿ ನಿಂತು ಚಿಕ್ಕಮಗಳೂರಿನ ಜನ ಹೈರಾಣಾಗಿ ಹೋಗಿದ್ದಾರೆ.
ಇಂದು ಚಿಕ್ಕಮಗಳೂರು ಪ್ರವಾಸದಲ್ಲಿರೋ ಡಿಸಿಎಂ ಅಶ್ವಥ್ ನಾರಾಯಣ್ 4 ಬಾರಿ ಝಿರೋ ಟ್ರಾಫಿಕ್ ಬಳಸಿದ್ದಾರೆ. ಚಿಕ್ಕಮಗಳೂರು ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಬಿಸಿಲಲ್ಲೇ ನಿಂತು ವಾಹನ ಸವಾರರು ರೇಗಾಡಿದ್ದಾರೆ.
ಈ ಹಿಂದೆ ಟ್ರಾಫಿಕ್ ವಿಚಾರದ ಬಗ್ಗೆ ಮಾತನಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ್, ನಾನು ಜನರ ಜೊತೆ ಬೆಳೆದು ಬಂದವನು. ಜನರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಳ್ಳಲ್ಲ. ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಾನು ಜನರಿಗೆ ಅನಾನುಕೂಲತೆ ಆಗಾದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಝಿರೋ ಟ್ರಾಫಿಕ್ ಉಪಯೋಗಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಒಂದೇ ದಿನದಲ್ಲಿ ನಾಲ್ಕು ಬಾರಿ ಝಿರೋ ಟ್ರಾಫಿಕ್ ಬಳಸಿದ್ದು ಚರ್ಚೆಗೆ ಕಾರಣವಾಗಿದೆ.
ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಈ ಹಿಂದೆ ಎಚ್ಚರಿಕೆ ನೀಡಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.