– ಜೀವ ಉಳಿಸೋ ಕೆಲ್ಸ ಅಂತ ಒಪ್ಕೊಂಡೆ!
ಚಿಕ್ಕಮಗಳೂರು: ರಾಜ್ಯದಲ್ಲಿ 6 ಜನ ನಕ್ಸಲರು ಶರಣಾಗಿರುವುದರ ಹಿಂದೆ ದನಕಾಯುವ ವೃದ್ಧೆಯೊಬ್ಬರು ಮಧ್ಯಸ್ಥಿಕೆವಹಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಸರ್ಕಾರ ಹಾಗೂ ನಕ್ಸಲರ ನಡುವೆ ಸಂಧಾನಕ್ಕೆ ಗೌರಮ್ಮ ಎಂಬ ಅಜ್ಜಿ ಕೊಂಡಿಯಾಗಿದ್ದರು. ಶರಣಾಗತಿ ಪ್ರಕ್ರಿಯೆಗೆ ವಿಕ್ರಂಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನಕ್ಕೆ ಯತ್ನ ನಡೆದಿತ್ತು. ಸುಮಾರು 72 ದಿನಗಳ ಕಾಲ ಈ ಪ್ರಯತ್ನ ನಡೆದಿದೆ.
ನಾಗರೀಕ ವೇದಿಕೆಯ ಸದಸ್ಯರ ಸಂಧಾನ ಪತ್ರವನ್ನು ನಕ್ಸಲರಿಗೆ ತಲುಪಿಸುವಲ್ಲಿ ಗೌರಮ್ಮ ಮಹತ್ವದ ಪಾತ್ರವಹಿಸಿದ್ದಾರೆ. 20 ರಿಂದ 30 ಕಿಲೋಮೀಟರ್ ನಡೆದುಕೊಂಡೆ ಸಂಪರ್ಕ ಸೇತುವೆಯಾಗಿ ಈ ಕೆಲಸ ಮಾಡಿದ್ದಾರೆ.
ಶೃಂಗೇರಿ ತಾಲೂಕಿನ ಕಿಗ್ಗಾದ ಕಿತ್ತಲೆಮನೆ ನಿವಾಸಿಯಾದ ಗೌರಮ್ಮ ದನ ಕಾಯುತ್ತಾ ಸೌದೆ ತರಲು ಕಾಡಿಗೆ ಹೋಗಿದ್ದಾಗ ಕಾಡಿನಲ್ಲಿ ಗೌರಮ್ಮರನ್ನ ಭೇಟಿಯಾಗಿ ಮಾತನಾಡಿಸಿದ್ದ ನಕ್ಸಲರು, ಚೀಟಿ ಕೊಡ್ತೀವಿ, ಕೊಡ್ತೀರಾ ಎಂದು ಕೇಳಿದ್ದರು. ಆಗ ಭಯ ಆಗುತ್ತೆ ಎಂದು ಹೇಳಿದ್ದೆ. ಬಳಿಕ ಜೀವ ಉಳಿಸೋ ಕೆಲಸ ಎಂದು ನನಗೂ ಖುಷಿ ಆಯ್ತು. ಎಲ್ಲಾ ಕಡೆ ಹೊಡೆದು ಹಾಕ್ತಾರೆ, ಅವರ ಜೀವ ಉಳಿಬೇಕು ಎಂದು ಈ ಕಾರ್ಯಕ್ಕೆ ಮುಂದಾದೆ ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.
ಈ ರೀತಿ ನಕ್ಸಲರ ಸಮಸ್ಯೆ ಬಗೆಹರಿಯಿತು, ಆದರೆ, ಜನರ ಸಮಸ್ಯೆ ಬಗೆಹರಿಯಲಿಲ್ಲ. ಅವರು ಹೊರಬಂದ ಮೇಲೆ ಜನರ ಪರ ಹೋರಾಟ ಮಾಡಬೇಕು. ನಮ್ಮ ಮನೆ ಸೇರಿದಂತೆ, ಊರಿನ ಯಾರ ಮನೆಗೂ ಹಕ್ಕುಪತ್ರ ಇಲ್ಲ ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.