ಚಿಕ್ಕಮಗಳೂರು: ಚಾಲನೆ ಮಾಡುತ್ತಿದ್ದ ಚಾಲಕ ಮೇಲೆಯೇ ಟ್ರ್ಯಾಕ್ಟರ್ ಹರಿದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ದೋರನಾಳು ನಿವಾಸಿ ಕಿರಣ್ (21) ಮೃತ ದುರ್ದೈವಿ. ಯರೇಹಳ್ಳಿಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಾಲಕ ಕಿರಣ್ ರಸ್ತೆ ಕೆಲಸಕ್ಕಾಗಿ ಮಣ್ಣು ತುಂಬಲು ಯರೇಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಮಣ್ಣು ತುಂಬಿಕೊಂಡು ಬರುವಾಗ ಟ್ರ್ಯಾಕ್ಟರಿನ ಹಿಂಬದಿ ಟೈರ್ ರಸ್ತೆಯ ಇಳಿಜಾರಿನಲ್ಲಿ ಗುಂಡಿಗೆ ಇಳಿದಿತ್ತು. ಇದರಿಂದಾಗಿ ಆಯತಪ್ಪಿ ಕಿರಣ್ ಕೆಳಗೆ ಬಿದ್ದಿದ್ದರು. ಈ ವೇಳೆ ಟ್ರ್ಯಾಕ್ಟರ್ ಚಾಲಕ ಕಿರಣ್ ಅವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ತರೀಕೆರೆ ಪೊಲೀಸರು ಪರಿಶೀಲನೆ ನಡೆಸಿ, ಕಿರಣ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.