ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆಯಲ್ಲಿ ಅತ್ಯಾಚಾರ ಆರೋಪ ಹೊತ್ತ ಸ್ವಾಮೀಜಿಗಳನ್ನು ಸಭಾದಿಂದ ಕೈಬಿಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಶ್ರೀ ಮಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸನಾತನ ಧರ್ಮ ಸಂವರ್ಧನೆಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಸಭೆಯಲ್ಲಿ ಶೃಂಗೇರಿಯ ಶಾರದಾಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ, ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಯಡತೊರೆ ಕೃಷ್ಣರಾಜನಗರದ ಮಠದ ಶಂಕರಭಾರತೀ ಸ್ವಾಮೀಜಿ, ಹರಿಪುರ ಮಠದಿಂದ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ. ಶಿವಗಂಗಾ ಮಠದಿಂದ ಪರುಷೋತ್ತಮಭಾರತೀ ಸ್ವಾಮೀಜಿ, ಎಡನೀರು ಮಠದಿಂದ ಕೇಶವಾನಂದ ಭಾರತೀ ಸ್ವಾಮಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು:
ಸನಾತನ ಧರ್ಮದ ಉದ್ಧಾರಕ್ಕಾಗಿ ಶ್ರೀ ಶಂಕರಭಗವತ್ಪಾದಕರು ನಮ್ಮ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಿಂದ ಸಂಚರಿಸಿ ಧರ್ಮಜಾಗೃತಿಯ ಜೊತೆ ರಾಷ್ಟ್ರದಲ್ಲಿ ಏಕತೆಯನ್ನೂ ಸಾಧಿಸಿದರು. ಈ ರೀತಿ ಸಂಚಾರದ ಸಂದರ್ಭದಲ್ಲಿ ಶ್ರೀ ಶಂಕರರು ಸಂಚರಿಸಿದ ಶ್ರೀಶೈಲ ಮುಂತಾದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸನಾತನ ಧರ್ಮ ಸಂವರ್ಧನೆಗಾಗಿ ವಿಶೇಷ ಸ್ಮಾರಕಗಳನ್ನು ನಿರ್ಮಿಸಲು ತೀರ್ಮಾನ.
ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರ ಶ್ರೀ ಶಂಕರರ ಸಾರಿದ ಏಕಾತ್ಮಕತೆಯನ್ನು ಸಮಾಜಕ್ಕೆ ತಿಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡಂತೆ ನಮ್ಮ ದೇಶದ ಉಳಿದ ರಾಜ್ಯಗಳಲ್ಲೂ ಹಮ್ಮಿಕೊಳ್ಳುವುದು ದೇಶದ ದೃಷ್ಟಿಯಿಂದ ಅತ್ಯಂತ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಮನುಷ್ಯನ ಶ್ರೇಯಸ್ಸಿಗೆ ವೇದೋಪನಿಷತ್ತುಗಳೇ ಪ್ರಮಾಣ ಎಂದು ಭಗವಂತ ಗೀತೆಯಲ್ಲಿ ಉಪದೇಶಿಸಿದ್ದಾನೆ. ಇಂತಹ ಉಪದೇಶಗಳನ್ನು ತಿಳಿಸಿ, ಸನಾತನ ಧರ್ಮ ಸಂವರ್ಧನೆಗಾಗಿ ಸನಾತನ ಧರ್ಮ ಸಂವರ್ಧಿನಿ ಸಭಾ ಪ್ರಯತ್ನಿಸುತ್ತಿದೆ. ಸಂನ್ಯಾಸಾಶ್ರಮ ಧರ್ಮಪಾಲನೆಗೆ ವೇದೋಪನಿಷತ್ತು ಮೊದಲಾದವುಗಳು ಪ್ರಮಾಣ ಹಾಗೂ ಮಠಾಧೀಶರಾಗಿರುವುವವರಿಗೆ ಶ್ರೀ ಶಂಕರರಿಂದ ವಿರಚಿತವಾದ ಮಠಾಮ್ನಾಯ ಪ್ರಮಾಣ. ಇದಕ್ಕೆ ವ್ಯತಿರಿಕ್ತವಾದ ಜೀವನ ನಡೆಸುವ ಹಾಗೂ ಅತ್ಯಾಚಾರ, ಅನೈತಿಕ ಸಂಬಂಧ ಮೊದಲಾದ ಗಂಭೀರ ಆರೋಪಗಳನ್ನು ಹೊತ್ತ ಮಠಾಧೀಶರನ್ನು ನಮ್ಮ ಸಂಸ್ಥೆಯಿಂದ ಕೈಬಿಡಲು ತೀರ್ಮಾನಿಸಲಾಯಿತು. ಆದರೆ ಆ ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.
ವೈಶಾಖ ಶುಕ್ಲ ಪಂಚಮಿ ಶ್ರೀ ಶಂಕರಜಯಂತ್ಯುತ್ಸವ. ಈ ಉತ್ಸವದಲ್ಲಿ ಶ್ರೀ ಶಂಕರರ ಅಷ್ಟೋತ್ತರ ಪಾರಾಯಣದ ಜೊತೆ ಭಾಷ್ಯ-ಪ್ರಕರಣಗ್ರಂಥ-ಸ್ತೋತ್ರ ಹಾಗೂ ಶಂಕರ ದಿಗ್ವಿಜಯಗಳ ಪಾರಾಯಣವನ್ನು ಐದು ದಿನಗಳ ಕಾಲ ಎಲ್ಲ ಆಸ್ತಿಕರು ಮಾಡುವಂತೆ ತಮ್ಮ ತಮ್ಮ ಮಠಗಳ ಶಿಷ್ಯರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಯಿತು.