ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಅಡುಗೆಯವರ ಎಡವಟ್ಟಿನಿಂದಾಗಿ ಯೂರಿಯಾ ಹಾಲು ಕುಡಿದ 19 ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪ ತಾಲೂಕು ಹರಹರಿಪುರ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಕ್ಕಳು ಸದ್ಯ ಹರಿಹರಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಕೆಗೊಂಡ ಬಳಿಕ ಸಂಜೆ ಮನೆಗೆ ತೆರಳಿದ್ದಾರೆ. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ನಿಲುವಾಗಿಲು ಮುಖ್ಯಶಿಕ್ಷಕ ಅಶೋಕ, ಹಿರಿಯ ಅಡುಗೆಯವರಾದ ಯಶೋದಮ್ಮ, ಅಡುಗೆ ಸಹಾಯಕರಾದ ಶಾರದಾ ಹಾಗೂ ಗುಲಾಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಡೆದದ್ದು ಏನು?
ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಶನಿವಾರ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಗಿದೆ. ಹಾಲು ಕುಡಿಯುತ್ತಿದ್ದಂತೆ ಮಕ್ಕಳು ಹಾಲು ಕಹಿಯಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣವೇ ಜಾಗೃತಗೊಂಡ ದೈಹಿಕ ಶಿಕ್ಷಣ ಶಿಕ್ಷಕರು ತಾವು ಸ್ಪಲ್ಪ ಹಾಲು ಕುಡಿದಿದ್ದಾರೆ. ಹಾಲು ವಿಷವಾಗಿದೆ ಅಂತ ಗೊತ್ತಾಗುತ್ತಿದ್ದಂತೆ ಮಕ್ಕಳಿಗೆ ಹಾಲು ಕುಡಿಯದಂತೆ ಸೂಚಿಸಿ, ಮುಖ್ಯಶಿಕ್ಷಕರಿಗೆ ಆ ವೇಳೆಗಾಗಲೇ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಅದರೆ ಅಷ್ಟೊತ್ತಿಗಾಗಲೇ ಶಾಲೆಯ 19 ಮಕ್ಕಳು ಹಾಲನ್ನು ಸೇವಿಸಿಯಾಗಿತ್ತು.
ಹಾಲು ಕುಡಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವೇಳೆ ಹಾಲಿನಲ್ಲಿ ವಿಷಕಾರಿ ಯೂರಿಯಾ ಸೇರಿರುವುದು ಪತ್ತೆಯಾಗಿದೆ. ಹಾಲಿನಲ್ಲಿ ಯಾರು ಯೂರಿಯಾ ಬೆರೆಸಿದ್ದು ಹಾಗೂ ಶಾಲೆಗೆ ಅದು ಹೇಗೆ ಬಂತು ಎನ್ನವುದು ಅನುಮಾನ ವ್ಯಕ್ತವಾಗಿದೆ.
ಯಶೋಧಮ್ಮ ಅವರು ಇಂದು ರಜೆ ಇದ್ದರು. ಹೀಗಾಗಿ ಶುಕ್ರವಾರವೇ ಹಾಲಿಗೆ ಬೇಕಾಗಿದ್ದ ಸಕ್ಕರೆ ಪ್ಯಾಕೇಟ್ ನೀಡಿ ಹೋಗಿದ್ದರು. ಅದನ್ನು ಪರಿಶೀಲನೆ ಮಾಡದೇ ಹಾಲಿಗೆ ಹಾಕಿದ್ದೇವೆ ಎಂದು ಸಹಾಯಕಿಯರಾದ ಗುಲಾಬಿ ಹಾಗೂ ಶಾರದಾ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಯಶೋಧಮ್ಮ ಹಾಗೂ ಅಡುಗೆ ಸಹಾಯಕರ ನಡುವೆ ಜಗಳವಾಗಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸಲು ಮಕ್ಕಳ ಜೀವನದ ಜೊತೆಗೆ ಆಟವಾಡಿದ್ದಾರೆ. ಇನ್ನು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಅಶೋಕ ಅವರು ನಿಲುವಾಗಿಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರಾಗಿ ಬಂದ ಮೇಲೆ ಅನೇಕ ಬದಲಾವಣೆ ತಂದಿದ್ದರು. ಖಾಸಗಿ ಶಾಲೆಯಂತೆ ನರ್ಸರಿ ತರಗತಿಗಳನ್ನು ಪ್ರಾರಂಭಿಸಿದ್ದರು. ಇದರಿಂದಾಗಿ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv