ಚಿಕ್ಕಮಗಳೂರು: ಸಿದ್ದರಾಮಯ್ಯನವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಐದು ವರ್ಷದ ಅವರ ಸಾಧನೆ ಹಾಗೂ ಐದು ತಿಂಗಳ ನಮ್ಮ ಸಾಧನೆ ಬಗ್ಗೆ ನಾನು ಸಿದ್ದರಾಮಯ್ಯನವರೊಂದಿಗೆ ಚರ್ಚೆಗೆ ಸಿದ್ಧ ಎಂದು ಸಚಿವ ಸಿ.ಟಿ ರವಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ಕಾರ ಮಂತ್ರಿ ಮಂಡಲ ರಚನೆಯಲ್ಲೇ ಬ್ಯುಸಿಯಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿಕಾರಿದ ಸಚಿವರು, ಚಿಕ್ಕಮಗಳೂರು ಅಥವಾ ಮೈಸೂರು ಯಾವ ಜಿಲ್ಲೆಯಾದರು ಅವರು ಐದು ವರ್ಷದ ಸಾಧನೆ ಜೊತೆ ನಮ್ಮ ಐದು ತಿಂಗಳ ಸಾಧನೆಯ ಅಂಕಿ-ಅಂಶಗಳ ಕುರಿತು ನಾನು ಸಿದ್ದರಾಮಯ್ಯನವರೊಂದಿಗೆ ಚರ್ಚೆಗೆ ಸಿದ್ಧ ಎಂದಿದ್ದಾರೆ.
Advertisement
Advertisement
ಯಾವ-ಯಾವ ಯೋಜನೆ ಮಂಜೂರಾಗಿದೆ. ಯಾವ ಹಂತದಲ್ಲಿದೆ ಎಂಬ ಎಲ್ಲಾ ಮಾಹಿತಿ ಕೊಡ್ತೀನಿ. ಅವರ ಹೇಳಿಕೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಅವರು ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಕೊಡಲಿಲ್ಲ. ಮೊಣಕೈಗೆ ತುಪ್ಪ ಸವರುವ ಕೆಲಸವನ್ನೂ ಮಾಡ್ಲಿಲ್ಲ. ನಾನು ಅಂಕಿ ಅಂಶಗಳ ಸಮೇತ ಚರ್ಚೆಗೆ ಸಿದ್ಧ ಎಂದಿದ್ದಾರೆ.
Advertisement
ಇದೇ ವೇಳೆ ನನಗೂ ಕೊಲೆ ಬೆದರಿಕೆ ಇದೆ ಎಂಬ ಹೇಳಿಕೆ ನೀಡಿರೋ ಹೆಚ್‍ಡಿಕೆ ವಿರುದ್ಧ ಹರಿಹಾಯ್ದ ಅವರು, ರಾಜ್ಯದ ಪ್ರತಿಯೊಬ್ಬ ಪ್ರಜೆಯ ರಕ್ಷಣೆ ಕೂಡ ಸರ್ಕಾರದ ಹೊಣೆ. ಕುಮಾರಸ್ವಾಮಿಯೂ ಸೇರಿದಂತೆ. ಕಳೆದು ಹೋಗಬಾರದೆಂದು ಹೇಳಿಕೆ ನೀಡೋ ಮೂಲಕ ಸಕ್ರಿಯವಾಗಿರೋದು ಸೂಕ್ತವಲ್ಲ ಎಂದಿದ್ದಾರೆ.
Advertisement
ಜನರ ಮಧ್ಯೆ ಇರೋದಕ್ಕೆ ಬೇಕಾದಷ್ಟು ಪಾಸಿಟಿವ್ ವಿಚಾರಗಳಿವೆ. ಅವುಗಳ ಮೂಲಕ ಜನರ ಮಧ್ಯೆ ಇರಬಹುದು. ಈ ಇಂತಹ ಹೇಳಿಕೆಗಳಿಂದ ಜನರ ಮಧ್ಯೆ ಇರಬಹುದೆಂದು ಬಯಸಿದರೆ ಅದು ಅವರ ಬಯಕೆ ಎಂದು ವ್ಯಂಗ್ಯವಾಡಿದ್ದಾರೆ. ಅವರ ಆರೋಪ ನಿರಾಧಾರವಾಗಿರುವಂತದ್ದು. ಅಷ್ಟೆ ಅಲ್ಲದೆ, ಸಂಘ ಪರಿವಾರ ಅನ್ನೋದು ಈಗ ಫ್ಯಾಷನ್ ಆಗಿದೆ. ಅವರು ಮಾಜಿ ಮುಖ್ಯಮಂತ್ರಿ, ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿದ್ದೋರು. ನಿರ್ದಿಷ್ಟವಾಗಿ, ಯಾರ ಮೂಲಕ ಬೆದರಿಕೆ ಬಂದಿದೆ ಎಂದು ದೂರು ನೀಡಲಿ ಎಂದು ಸಲಹೆ ನೀಡಿದ್ದಾರೆ.
ದೂರು ನೀಡಿದ್ರೆ ಸತ್ಯಾಸತ್ಯತೆ ಪರಿಶೀಲಿಸಿ ಯಾರೇ ಆದರೂ ಕ್ರಮಕೈಗೊಳ್ಳುತ್ತೇವೆ. ಪ್ರಜಾಪ್ರಭುತ್ವದಲ್ಲಿ ಬೆದರಿಕೆಗೆ ಅವಕಾಶವಿಲ್ಲ. ಯಾರಿಗೂ ಬೆದರಿಸೋಕು ಬಿಡಲ್ಲ. ನಾವು ಬೆದರೋದಿಲ್ಲ ಎಂದಿದ್ದಾರೆ.