ಚಿಕ್ಕಮಗಳೂರು: 30 ವರ್ಷಗಳಿಂದ ದಣಿವರಿಯದೆ ಓಡಿದ್ದ, ಕಾರ್ಮಿಕರೇ ಮಾಲೀಕರಾಗಿದ್ದ ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ ಬಿದ್ದಿದೆ.
ಡೀಸೆಲ್ ಬೆಲೆ, ಟ್ಯಾಕ್ಸ್, ಇನ್ಸುರೆನ್ಸ್ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲಿದ್ದ ಚಿಕ್ಕಮಗಳೂರಿನ ಕೊಪ್ಪದ ಈ ಬಡವರ ಬಸ್ ಕಳೆದೆರಡು ವರ್ಷಗಳಿಂದ ಸರ್ಕಾರದ ನೆರವನ್ನ ಜಾತಕ ಪಕ್ಷಿಯಂತೆ ಕಾಯ್ತಿತ್ತು. ಆದರೆ ಸರ್ಕಾರದ ನಿರೀಕ್ಷಿತ ಸಹಕಾರ ಸಿಗದ ಕಾರಣ ಮಲೆನಾಡಿಗರ ಬದುಕಲ್ಲಿ ಹಾಸುಹೊಕ್ಕಾಗಿದ್ದ ಹೆಮ್ಮೆಯ ಸಾರಿಗೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಇದರಿಂದ 300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿದ್ದು, ಇಂದಿಗೂ ಸರ್ಕಾರದ ಸಹಾಯಹಸ್ತವನ್ನ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ
Advertisement
Advertisement
ಶನಿವಾರದಿಂದಲೇ ಎಲ್ಲಾ ಬಸ್‍ಗಳನ್ನ ಕೇಂದ್ರ ಕಚೇರಿಯಲ್ಲಿ ನಿಲ್ಲಸಿದ್ದ ಬಸ್ ಮಾಲೀಕರು ಭಾನುವಾರ ಕೊಪ್ಪ ನಗರದಲ್ಲಿ ಸಾರ್ವಜನಿಕರು ಹಾಗೂ ಜನನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಸರ್ಕಾರದ ಸಹಕಾರವಿಲ್ಲದೆ ಬಸ್‍ಗಳ ಸಂಚಾರ ಸಾಧ್ಯವಿಲ್ಲ ಎಂಬುದರಿಂದ ಬಸ್‍ಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇಂದಿನಿಂದ ಮಲೆನಾಡಿಗರ ಜೀವನಾಡಿಯಾಗಿದ್ದ ಬಸ್‍ಗಳು ರಸ್ತೆಗಿಳಿಯಲ್ಲ. ಇದರಿಂದ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದ 300ಕ್ಕೂ ಹೆಚ್ಚು ಕುಟುಂಬಗಳು ಚಿಂತಾಕ್ರಾಂತರಾಗಿದ್ದಾರೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಲಕ್ಷಾಂತರ ಸಾರ್ವಜನಿಕರು ಈ ಬಸ್‍ಗಳನ್ನೇ ಆಶ್ರಯಿಸಿದ್ದರು. ಆದರೆ ಇಂದಿನಿಂದ ಬಸ್‍ಗಳು ರಸ್ತೆಗಿಳಿಯದ ಕಾರಣ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.
Advertisement
Advertisement
ಸರ್ಕಾರದ ನೆರವನ್ನ ಬಯಸಿದ ಸಹಕಾರ ಸಾರಿಗೆ ಸಂಸ್ಥೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿ ಸಂಸ್ಥೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದರು. ನೌಕರರ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಹಣಕಾಸಿನ ನೆರವು ನೀಡೋ ಭರವಸೆ ನೀಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ, ಸಹಕಾರ, ನೆರವು ಯಾವುದೂ ಸಿಗಲಿಲ್ಲ. ದಿನಕ್ಕೆ ಡಿಸೇಲ್‍ನಿಂದಲೇ ಲಕ್ಷಾಂತರ ಹಣ ನಷ್ಟವಾಗುತ್ತಿರುವುದರಿಂದ ನಷ್ಟವನ್ನ ಸರಿದೂಗಿಸಲಾಗದೆ ಸಂಸ್ಥೆಗೆ ತಾತ್ಕಾಲಿಕವಾಗಿ ಬೀಗ ಹಾಕಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ನೆರವು ನೀಡಿದರೆ ಸಹಕಾರ ಸಾರಿಗೆ ಕಾರ್ಯರೂಪಕ್ಕೆ ಬಂದು ಮಲೆನಾಡಿಗರ ಮನೆ-ಮನೆಗಳಲ್ಲಿ ಹಬ್ಬದ ವಾತಾವರಣವಿರುತ್ತೆ.
30 ವರ್ಷಗಳಿಂದ ಮಲೆನಾಡಿನ ಮಳೆ-ಗಾಳಿಗೂ ಜಗ್ಗದೆ ಮಲೆನಾಡ ಕುಗ್ರಾಮಗಳ ಜನರ ಬದುಕಿಗೂ ಸಹಕಾರ ಸಾರಿಗೆ ಸಾಥ್ ನೀಡಿತ್ತು. ಆದರೀಗ ಕಾಮೀಕರೇ ಕಟ್ಟಿ ಬೆಳೆಸಿದ ಸಂಸ್ಥೆಯನ್ನ ಕಾರ್ಮಿಕರೇ ನಡೆಸಲು ಸಾಧ್ಯವಾಗ್ತಿಲ್ಲ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಈ ಬಸ್‍ಗಳನ್ನ ಆಶ್ರಯಿಸಿಕೊಂಡಿದ್ದರು. ಇದೀಗ ಬಸ್‍ಗಳ ಸಂಚಾರ ನಿಂತಿರುವುದರಿಂದ ಮಲೆನಾಡಿಗರು ಸಂಕಷ್ಟಕ್ಕೀಡಾಗಿರೋದಂತು ಸತ್ಯ. ಹೀಗಾಗಿ ಕೂಡಲೇ ಸರ್ಕಾರ ಇವರ ನೆರವಿಗೆ ಧಾವಿಸಿಬೇಕಾದ ಅನಿವಾರ್ಯತೆ ಬಹಳಷ್ಟಿದೆ.