ಚಿಕ್ಕಮಗಳೂರು: ರಾಜ್ಯ ಸರ್ಕಾರ, ಪರಿಹಾರ-ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ. ಏಕೆಂದರೆ ಮಹಾಮಳೆಗೆ ನಿರ್ಗತಿಕರಾದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಆಲೇಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮೇಗೂರು, ಮಲೆಮನೆ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿದೆ. ಅಲ್ಲದೆ ದಾಖಲೆ ಇರುವವರಿಗಷ್ಟೇ ಜಮೀನು. ಒತ್ತುವರಿದಾರರಿಗೆ ಏನೂ ಸಿಗುವುದಿಲ್ಲ, ಕೇವಲ ಮನೆಯಷ್ಟೆ ಎಂದು ಸರ್ಕಾರ ಹೇಳಿದೆ. ಇದು ನಿರಾಶ್ರಿತರಿಗೆ ಬರಸಿಡಿಲು ಬಡಿದಂತಾಗಿದೆ.
ಸರ್ಕಾರ ಕೊಟ್ಟ ಜಾಗಕ್ಕೆ ಹೋಗಬೇಕು. ಇಷ್ಟು ವರ್ಷ ವಾಸವಿದ್ದ ಜಾಗದಿಂದ ಏನ್ನನ್ನು ತರದೆವ, ಸರ್ಕಾರ ಕೊಟ್ಟಿದ್ದನ್ನು ತೆಗೆದುಕೊಂಡು ಕೊಟ್ಟ ಜಾಗಕ್ಕೆ ಹೋಗುವಾಗ ಪರಿಹಾರ ಪ್ರಶ್ನಿಸಿ ಕೋರ್ಟಿಗೆ ಹೋಗಲ್ಲವೆಂದು ಸೈನ್ ಮಾಡಿ ಹೋಗಬೇಕು. ಸರ್ಕಾರದ ಈ ರೀತಿ-ನೀತಿಗಳು ಮಲೆನಾಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದ್ದು, ಮುಂದಿನ ದಾರಿ ಕಾಣದೆ ಇಷ್ಟಕ್ಕೆಲ್ಲಾ ಕಾರಣಕರ್ತನಾದ ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಾವು ಕೊಟ್ಟಿದ್ದ ಜಾಗಕ್ಕೆ ಹೋಗಬೇಕು ಎಂದು ಸರ್ಕಾರ ಭೂಮಿ ಕೊಟ್ಟರೆ ಏನ್ ಮಾಡುವುದು ಎಂಬುದು ಮಲೆನಾಡಿಗರ ಆತಂಕ. ಏಕೆಂದರೆ ಅಡಿಕೆ, ಕಾಫಿ, ಮೆಣಸು ಯಾವುದ್ದನ್ನು ಬೆಳೆಯಬೇಕು ಎಂದರೆ ಏಳೆಂಟು ವರ್ಷ ಬೇಕು. ಆ ಏಳೆಂಟು ವರ್ಷ ದುಡಿಯುವುದೋ, ದುಡಿಯುವುದರಲ್ಲಿ ತಿನ್ನುವುದೋ, ಮಕ್ಕಳನ್ನು ಸಾಕುವುದು ಅಥವಾ ತೋಟ ಮಾಡುವುದೋ ಎನ್ನುವುದು ಮಲೆನಾಡಿಗರಿಗೆ ಚಿಂತೆಗೀಡು ಮಾಡಿದೆ.
ಈಗಾಗಲೇ ಸರ್ಕಾರ 300ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿ ಎಲ್ಲರ ಅಕೌಂಟ್‌ಗೂ ಒಂದೊಂದು ಲಕ್ಷ ಹಣ ಹಾಕಿದೆ. ಕೆಲವರು ಹಣವನ್ನು ಬಳಸಿಕೊಂಡಿದ್ದರೆ, ಮತ್ತೆ ಕೆಲವರು ಬಳಸಿಕೊಂಡಿಲ್ಲ. 300 ಜನರಲ್ಲಿ 40-45 ಜನ ಸರ್ಕಾರದ ನೀತಿಗೆ ಒಪ್ಪಿ ಸಹಿ ಹಾಕಿ ತಲೆ ಮೇಲೆ ಕೈ ಹಾಕಿ ಕೂತಿದ್ದಾರೆ. ಸರ್ಕಾರ ಜಮೀನುಗಳ ದಾಖಲೆ ಇದ್ದವರಿಗೆ ಮಾತ್ರ ಜಮೀನು ಎಂತಿದೆ. ನೆರೆ ವೀಕ್ಷಣೆಗೆ ಬಂದಿದ್ದ ಸಚಿವರು ಯಾರಿಗೂ ಅನ್ಯಾಯ ಮಾಡಲ್ಲ ಎಂದಿದ್ದರು. ಆದರೆ ಇದ್ಯಾವ ನ್ಯಾಯ ಎಂದು ಸರ್ಕಾರವೇ ಉತ್ತರಿಸಬೇಕಿದೆ.
ಸರ್ಕಾರದ ರೀತಿ-ರಿವಾಜುಗಳು ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಅರಣ್ಯ ಇಲಾಖೆ ಮನಸಲ್ಲೇ ಮೊಸರನ್ನು ತಿಂತಿದೆ. ಏಕೆಂದರೆ ಮಲೆನಾಡಲ್ಲಿ ಲಕ್ಷಾಂತರ ಎಕ್ರೆ ಅರಣ್ಯ ಒತ್ತುವರಿಯಾಗಿದೆ. ಇಲಾಖೆಗೆ ಕಂಡಿದ್ದು ಸಣ್ಣವರದ್ದಷ್ಟೆ. ಅಧಿಕಾರಿಗಳು ತೆರವಿಗೆ ಮುಂದಾದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಮಹಾಮಳೆಗೆ ಬೆದರಿ ಜನರೇ ಸರ್ಕಾರದ ನೀತಿಗೆ ಒಪ್ಪಿ ಜಾಗ ಖಾಲಿ ಮಾಡುತ್ತಿದ್ದಾರೆ.