ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಸೌಂದರ್ಯ ಸವಿಯುವ ಪ್ರವಾಸಿಗರಿಗಾಗಿ ಹೊಸ ವರ್ಷ – ಕ್ರಿಸ್ಮಸ್ ಸಮಯದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ (Department of Tourism) ಹೆಲಿಟೂರಿಸಂ (Heli Tourism) ಆರಂಭಿಸಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯನವನ್ನು ಪ್ರಮೋಟ್ ಮಾಡಲು ಸರ್ಕಾರ ಮುಂದಾಗಿದೆ.
ಕಾಫಿನಾಡ ಪ್ರವಾಸೋದ್ಯಮವನ್ನ `ಒಂದು ಜಿಲ್ಲೆ ಹಲವು ರಾಜ್ಯ’ ಅಂತಿದ್ದ ಸರ್ಕಾರ ಈಗ ಪ್ರಮೋಟ್ ಮಾಡುವ ಮನಸ್ಸು ಮಾಡಿದೆ. ಸಿಎಂ-ಡಿಸಿಎಂ-ಮಿನಿಸ್ಟರ್ ಬಂದಾಗ ಇಲ್ಲಿ ಹೆಲಿಕಾಪ್ಟರ್ ಸದ್ದು ಕೇಳ್ತಿತ್ತು. ಆದ್ರೀಗ, 18 ದಿನಗಳ ಕಾಲ ನಿತ್ಯ ಕಾಫಿನಾಡ ಕಾಡುಗಳಲ್ಲಿ ಹೆಲಿಕಾಪ್ಟರ್ ಸದ್ದು ಮಾಡಲಿದೆ. ಇದನ್ನೂ ಓದಿ: Explainer | ಕಾಳಿಂಗ ಸರ್ಪ ಹಿಡಿಯೋಕೆ ಅರಣ್ಯ ಇಲಾಖೆಯಿಂದಲೇ ವ್ಯವಸ್ಥೆ - ವಿಶೇಷ ತರಬೇತಿ ಅಗತ್ಯವೇ? ಉರಗ ತಜ್ಞರು ಹೇಳೋದೇನು?
ಮುಳ್ಳಯ್ಯನಗಿರಿ, ದತ್ತಪೀಠ, ಮೇರುತಿ ಗುಡ್ಡ, ದೇವರಮನೆ ಗುಡ್ಡ, ಎತ್ತಿನಭುಜ, ರಾಣಿ ಝರಿ. ಮುಗಿಲೆತ್ತರದ ಬೆಟ್ಟ-ಗುಡ್ಡಗಳು. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ದಟ್ಟ ಕಾನನ. ಭೂಮಿಗೆ ಹಾಸಿದಂತೆ ಕಾಣುವ ಕಾಫಿ ತೋಟಗಳು. ಒಂದೋ-ಎರಡೋ… ಇಷ್ಟು ದಿನ ಕಾಫಿನಾಡ ಸೌಂದರ್ಯವನ್ನ ಕಾರು-ಬೈಕಿನಲ್ಲಿ ಸವಿದಿದ್ದವರಿಗೆ ಇದೀಗ ಹೆಲಿಕಾಪ್ಟರ್‌ನಲ್ಲಿ ಸವಿಯುವ ಸುವರ್ಣಾವಕಾಶ ಲಭ್ಯವಾಗಿದೆ.
ತುಂಬಿ ಎವೀಯೇಶನ್ ಸಹಭಾಗಿತ್ವದಲ್ಲಿ ಕಾಫಿನಾಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ 18 ದಿನಗಳ ಕಾಲ ಪ್ರವಾಸ ಪ್ರಿಯರಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಮೂಡಿಗೆರೆ ತಾಲೂಕಿನ ದೇವರ ಮನೆ ಗುಡ್ಡ, ಎತ್ತಿನ ಭುಜ, ಕಳಸ ತಾಲೂಕಿನ ಮೇರುತಿ ಹಾಗೂ ರಾಣಿ ಝರಿ ಜಲಪಾತದ ಮನಮೋಹಕ ದೃಶ್ಯವನ್ನ ಹೆಲಿಕ್ಯಾಪ್ಟರ್‌ನಲ್ಲಿ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ.
ಈ ಅವಕಾಶ ಕೇವಲ 18 ದಿನಗಳ ಕಾಲ ಮಾತ್ರ ಇರಲಿದೆ. ಚಿಕ್ಕಮಗಳೂರು ಪ್ರವಾಸೋದ್ಯಮವನ್ನ ಉತ್ತೇಜಿಸುವ ಸಲುವಾಗಿ ಈ ಯೋಜನೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ನೇತೃತ್ವದಲ್ಲಿ ಈ ಯತ್ನ ಮುಂದುವರಿಯಬಹುದು. 6 ನಿಮಿಷಕ್ಕೆ 4 ಸಾವಿರ ಹಾಗೂ 12 ನಿಮಿಷಕ್ಕೆ 8 ಸಾವಿರ ನಿಗದಿ ಮಾಡಲಾಗಿದೆ. ಈ ವರ್ಷವಂತೂ ಕಾಫಿನಾಡಲ್ಲಿ ಸಮೃದ್ಧ ಮಳೆಯಾಗಿರುವುದರಿಂದ ಪ್ರವಾಸಿ ತಾಣಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಕಾಫಿನಾಡ ದಟ್ಟ ಕಾನನದ ಸೌಂದರ್ಯ ಕಾಫಿನಾಡ ಹೆಲಿಟೂರಿಂಸ್‍ಗೆ ಪ್ರಶಸ್ತವಾಗಿದೆ. ಕಾಫಿನಾಡ ಪ್ರವಾಸೋದ್ಯಮವನ್ನ ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬೆಂಗಳೂರು-ಮೈಸೂರು ಸೇರಿದಂತೆ ದೊಡ್ಡ ದೊಡ್ಡ ನಗರದ ಪ್ರವಾಸಿ ಪ್ರಿಯರನ್ನು ಆಕರ್ಷಿಸಲು ಮುಂದಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಕಾಫಿನಾಡ ಪ್ರವಾಸೋದ್ಯಮಕ್ಕೆ ವಿಶ್ವ ದರ್ಜೆಯ ಸ್ಥಾನಮಾನ ನೀಡಲು ಮುಂದಾಗಿದೆ. ಸರ್ಕಾರದ ಈ ಯೋಜನೆಯನ್ನು ರಾಜ್ಯದ ಪ್ರವಾಸಿ ಪ್ರಿಯರು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಬಳಿಯೇ ಬಂತು ಬಿಎಂಟಿಸಿ ಬಸ್ ನಿಲ್ದಾಣ!


