ಚಿಕ್ಕಮಗಳೂರು: ಇಂದು ರಸ್ತೆ, ನಾಳೆ ಅಭಿವೃದ್ಧಿ, ನಾಡಿದ್ದು ಸೌಲಭ್ಯ, ಆಚೆನಾಡಿದ್ದು ಸರ್ಕಾರದಿಂದ್ಲೇ ಪ್ರವಾಸಿ ಮಂದಿರ. ಆಮೇಲೆ ಉಳ್ಳವರಿಂದ ಹೋಂ ಸ್ಟೇ, ರೆಸಾರ್ಟ್. ಅಷ್ಟೊತ್ತಿಗೆ ಎಲ್ಲ ಕೆಲಸ ಮುಗಿಸಿ ಮುಳ್ಳಯ್ಯನಗಿರಿಯನ್ನ ಮಣ್ಣು ಮಾಡಿರುತ್ತಾರೆ. ಸಮುದ್ರ ಮಟ್ಟದಿಂದ 6300 ಅಡಿ ಎತ್ತರದ ಪ್ರದೇಶ, ಕರ್ನಾಟಕದ ಎತ್ತರದ ಗಿರಿಶಿಖರ, ಮುಗಿಲೆತ್ತರದ ಬೆಟ್ಟಗುಡ್ಡಗಳು, ತಣ್ಣನೆಯ ಗಾಳಿ, ವರ್ಷಪೂರ್ತಿ ಮಳೆ ಸುರಿಯೋ ಪ್ರದೇಶ ಅಂತೆಲ್ಲಾ ನಾಮಾಂಕಿತ ಹೊಂದಿರೋ ಮುಳ್ಳಯ್ಯನಗಿರಿ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗೋ ಕಾಲ ದೂರವಿಲ್ಲ.
Advertisement
ಹೌದು. ಕರ್ನಾಟಕದ ಅತ್ಯಂತ ಎತ್ತರದ ಗಿರಿಶಿಖರ ಎಂಬ ಖ್ಯಾತಿ ಗಳಿಸಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಸಂಚಕಾರ ತಟ್ಟಿದೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನ ಸರ್ಕಾರ ಸ್ಫೋಟಿಸುತ್ತಿದೆ. ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡ್ತಿರೋರು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ಮುಳ್ಳಯ್ಯನಗಿರಿಯನ್ನು ಮುಂದಿನ ಪೀಳಿಗೆಯವರು ಬರೀ ಫೋಟೋ, ವಿಡಿಯೋ ಅಥವಾ ಹಿರಿಯರ ವರ್ಣನೆಯಲ್ಲಿ ನೋಡಬೇಕಾಗುತ್ತದೆ ಎಂದು ಪರಿಸರವಾದಿ ಗಿರಿಜಾಶಂಕರ್ ಗರಂ ಆಗಿದ್ದಾರೆ.
Advertisement
Advertisement
ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣನ್ನ ಅಗೆಯೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ. ಆದರೆ, ನೈಸರ್ಗಿಕ ಸಂಪತ್ತು ಕಾಪಾಡಬೇಕಾಗಿರೋ ಸರ್ಕಾರವೇ ಕೊಡಲಿ ಹಾಕ್ತಿರೋದು ದುರಾದೃಷ್ಟ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಒಟ್ಟಾರೆ ಅಭಿವೃದ್ಧಿಯ ಹೆಸರಲ್ಲಿ ಮುಳ್ಳಯ್ಯನಗಿರಿಯಲ್ಲಿ ರಸ್ತೆ ನಿರ್ಮಿಸ್ತಿರೋ ಸರ್ಕಾರದ ಚಿಂತನೆ ರಸ್ತೆ ನಿರ್ಮಾಣಕ್ಕಷ್ಟೇ ಸೀಮಿತವಾಗಿದರೆ ಸರಿ. ಇಲ್ಲವಾದಲ್ಲಿ ಮುಳ್ಳಯ್ಯನಗಿರಿ ಇತಿಹಾಸದ ಪುಟ ಸೇರೋದು ಖಚಿತವಾಗಲಿದೆ.