ಚಿಕ್ಕಮಗಳೂರು: ಬಾವಿಯೊಳಗೆ ಬಿದ್ದ ಹಾವೊಂದು ಇಡೀ ರಾತ್ರಿ ನೀರಿನಲ್ಲಿ ಈಜಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಚಕಮಕಿ ಗ್ರಾಮದ ಕೃಷ್ಣ ಭಟ್ ಎಂಬವರು ಮನೆ ಹಿಂದೆ ಇದ್ದ ಬಾವಿಯಲ್ಲಿ ಶುಕ್ರವಾರ ಸಂಜೆ ಏನೂ ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಹೋಗಿ ನೋಡಿದಾಗ ಹಾವೊಂದು ಈಜುತ್ತಾ ಮೇಲೆ ಬರಲು ಯತ್ನಿಸುತ್ತಿತ್ತು. ಬಾವಿಗೆ ಸುತ್ತಲೂ ಸಿಮೆಂಟ್‍ನಿಂದ ಪ್ಲಾಸ್ಟರ್ ಮಾಡಿರುವುದರಿಂದ ಹಾವು ತೆವಳಲಾಗದೆ ನೀರಿನಲ್ಲಿ ಈಜುತ್ತಿತ್ತು. ಕೂಡಲೇ ಕೃಷ್ಣ ಭಟ್ ಅವರು ಹಾವನ್ನು ಕೋಲಿನಿಂದ ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ.
Advertisement
Advertisement
ಹಾವು ಎಡೆ ಬಿಟ್ಟುಕೊಂಡು ಜೋರಾಗಿ ಉಸಿರು ಬಿಡುತ್ತಿದ್ದರಿಂದ ಕೃಷ್ಣ ಭಟ್ ಅವರಿಗೆ ಧೈರ್ಯ ಸಾಕಾಗಿಲ್ಲ. ಕೂಡಲೇ ಉರಗ ತಜ್ಞ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರೀಫ್ ಐದೇ ನಿಮಿಷಕ್ಕೆ ಬಾವಿಯಲ್ಲಿ ಈಜುತ್ತಿದ್ದ ಹಾವನ್ನ ಮೇಲೆ ಎತ್ತಿದರು. ಸುಸ್ತಾಗಿ ಜೋರಾಗಿ ಉಸಿರು ಬಿಡುತ್ತಿದ್ದ ಹಾವನ್ನು ಸ್ವಲ್ಪ ಹೊತ್ತು ನೆಲದ ಮೇಲೆ ಬಿಟ್ಟರು. ತದನಂತರ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇಡೀ ರಾತ್ರಿ ನೀರಿನಲ್ಲಿ ಈಜಿರುವ ಹಾವನ್ನ ಕಂಡು ಕೆಲವರು ಮರುಕ ವ್ಯಕ್ತಪಡಿಸಿದರು.