ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚೇಗು ಗ್ರಾಮದ ನಿವಾಸಿ ಮಂಜಯ್ಯ (58) ಮೃತ ದುರ್ದೈವಿ. ಲಕ್ಷ್ಮಣ ಕೊಲೆಗೈದ ಆರೋಪಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೋಟದ ವಿಚಾರವಾಗಿ ಮಂಜಯ್ಯ ಹಾಗೂ ಲಕ್ಷ್ಮಣ ಸಹೋದರರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆದಿತ್ತು. ಈ ವಿಚಾರವಾಗಿ ಸೋಮವಾರವೂ ಸಹೋದರರು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ಲಕ್ಷ್ಮಣ ನಾಡ ಬಂದೂಕಿನಿಂದ ಅಣ್ಣನ ಮೇಲೆ ಪೈರಿಂಗ್ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.