ಚಿಕ್ಕಮಗಳೂರು: ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಬುದ್ಧಿಮಾಂದ್ಯರು. ಆ ಮಕ್ಕಳ ಪರಿಸ್ಥಿತಿ ಕೂತಲ್ಲೇ ಎಲ್ಲಾ. ಮನೆಗೆ ಆಧಾರ ಸ್ತಂಭವಾಗಿ ಸಂಸಾರದ ನೊಗ ಹೊತ್ತಿದ್ದ ಅಪ್ಪನೂ ಮಕ್ಕಳ ಜೊತೆ ಮಗುವಾಗಿದ್ದಾನೆ. ಮೂವರನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ಅಮ್ಮನದ್ದು. 3 ದಶಕಗಳಿಂದ ಅಕ್ಷರಶಃ ಗೃಹಬಂಧನದಂತೆ ಬದುಕು ಸವೆಸಿದ ಆ ತಾಯಿ ಈಗ ಮಕ್ಕಳ ಜೊತೆ ಗಂಡನನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ನೆನೆದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚನ್ನಹಡ್ಲು ಗ್ರಾಮದ ಈ ಕಥೆ ಕೇಳಿದ್ರೆ ನಿಮ್ಮ ಕಣ್ಣುಗಳು ತೇವಗೊಂಡು, ನಮ್ಮ ಶತ್ರುಗೂ ಈ ಸ್ಥಿತಿ ಬೇಡ ಅಂತ ಭಗವಂತನಿಗೆ ಬೇಡಿಕೊಳ್ಳುತ್ತೀರ.
ಹೌದು, ಬದುಕಿನ ಮೇಲೆ ವಿಧಿ ಸವಾರಿ ಮಾಡ ಹೊರಟರೆ ಬದುಕು ಮೂರಾಬಟ್ಟೆಯಾಗೋದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಈ ಕುಟುಂಬದ ಕಣ್ಣೀರ ಕಥೆ ಇಂದು-ನಿನ್ನೆಯದಲ್ಲ. ಬರೋಬ್ಬರಿ ಮೂರು ದಶಕದ್ದು. ವಯಸ್ಸಿಗೆ ಬಂದ ಬುದ್ದಿಮಾಂದ್ಯ ಮಕ್ಕಳಿಬ್ಬರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆ ದಂಪತಿಗೆ ಮಕ್ಕಳ ಸಾಕುವುದೇ ಸವಾಲು. ಅಮ್ಮ ಮಕ್ಕಳ ಆರೈಕೆಯಲ್ಲಿದ್ದರೆ, ಅಪ್ಪ ತುತ್ತಿನ ಚೀಲಕ್ಕಾಗಿ ಹೋರಾಡುತ್ತಿದ್ದ. ಇದೀಗ ತಂದೆಯೂ ಹಾಸಿಗೆ ಹಿಡಿದಿದ್ದಾರೆ. 2 ಬುದ್ಧಿಮಾಂದ್ಯ ಮಕ್ಕಳ ಜೊತೆ ಆ ತಾಯಿಗೆ ಕೈಕಾಲಾಡದ ಗಂಡನೂ ಮಗುವಾಗಿದ್ದಾರೆ. ಈ ಸ್ಟೋರಿ ಓದಿದ ಮೇಲೆ ಕಲ್ಲಿನ ದೇವರು ನಿಜಕ್ಕೂ ಕಲ್ಲೇ ಎಂದು ಅನ್ನಿಸದೆ ಇರದು.
ಸದಾ ಹಸನ್ಮುಖಿ ಮಗಳು. ಕೂತಲ್ಲಿಂದ ಮೇಲೇಳದ ಮಗ. ಪಾರ್ಶ್ವವಾಯುವಿನಿಂದ ಬಳಲುತ್ತಿರೋ ಅಪ್ಪ. ಕಟ್ಕೊಂಡ ಗಂಡ, ಹೆತ್ತ ಮಕ್ಕಳ ಸ್ಥಿತಿ ಕಂಡು ಕಣ್ಣೀರಿಡುತ್ತಿರುವ ಅಮ್ಮ. ವಿಧಿಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಕುಟುಂಬ ನೊಂದು-ಬೆಂದು, ಬಳಲಿ ಬೆಂಡಾಗಿದೆ. ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರೋದು ಬೇಡ. ಇದು ಮಲೆನಾಡ ಶ್ರಮಜೀವಿ ಹಾಗೂ ಸ್ವಾಭಿಮಾನಿ ಸುಂದರ್ ಕುಟುಂಬ ಘನಘೋರ ಕಥೆ. ಇರೋ ಇಬ್ಬರು ಮಕ್ಕಳು ಚಿಕ್ಕವರಲ್ಲ. ಮಗನಿಗೆ 29 ವರ್ಷ. ಮಗಳಿಗೆ 24 ವರ್ಷ ವಯಸ್ಸು. ವಿಧಿಯಾಟಕ್ಕೆ ಇಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಬಲವಿಲ್ಲದೆ ಬಳಲುತ್ತಿದ್ದಾರೆ.
ಮೂರು ದಶಕಗಳಿಂದ 2 ಮಕ್ಕಳ ಸಾಕುವುದಕ್ಕೆ ಸುಂದರ್-ಅರುಣ ದಂಪತಿ ಪಟ್ಟ ಕಷ್ಟ ಹೇಳಲು ಪದ ಸಾಲದು. ಮಕ್ಕಳ ಒಂದೊಂದು ಹೆಜ್ಜೆಯ ಹಿಂದೆಯೂ ದೈವಸ್ವರೂಪಿ ಅಮ್ಮನ ನೆರಳಿದೆ. ಹಾಗಾಗಿ ಅಮ್ಮನದ್ದು ಅಕ್ಷರಶಃ ಗೃಹಬಂಧನ. ಅಮ್ಮ ಮಕ್ಕಳ ನೋಡ್ಕೊಂಡ್ರೆ, ಮಕ್ಕಳ ಮೆಡಿಸನ್ ಹಾಗೂ ತುತ್ತಿನ ಚೀಲಕ್ಕಾಗಿ 3 ದಶಕಗಳಿಂದ ದಣಿವರಿಯದ ದುಡಿಮೆ ಅಪ್ಪನದ್ದು. ಆದರೆ ಪಾಪಿ ಕೊರೊನಾ ಕಾಟಕ್ಕೆ ತಿಂಗಳಿಂದ ಮನೆಯಲ್ಲಿದ್ದ ಅಪ್ಪನೂ ಪಾಶ್ರ್ವವಾಯುವಿನಿಂದ ಹಾಸಿಗೆ ಹಿಡಿದಿದ್ದಾರೆ. ಹಾಸಿಗೆಯಿಂದ ಏಳಲಾಗದೆ, ಮಾತನಾಡಲಾಗದೆ ವಿಧಿಗೆ ಹಿಡಿಶಾಪ ಹಾಕೊಂಡ್ ಮೌನಕ್ಕೆ ಜಾರಿದ್ದಾರೆ.
ಮನುಷ್ಯನಿಗೆ ಜೀವನದಲ್ಲಿ ಒಂದೋ-ಎರಡೋ ಕಷ್ಟ ಬಂದರೆ ಎದುರಿಸಿ, ಜಯಿಸಬಹುದು. ಮೇಲಿಂದ ಮೇಲೆ ಕಷ್ಟಗಳು ಬಂದರೆ ಎಂತವರಿಗೂ ಗೆಲುವು ಸಾಧಿಸುವುದು ಅಸಾಧ್ಯ. ಈ ಕುಟುಂಬ ಕಥೆ ಅದಕ್ಕಿಂತ ಭಿನ್ನವಾಗೇನಿಲ್ಲ. 2019ರ ವರುಣನ ರಣರುದ್ರ ಪ್ರವಾಹಕ್ಕೆ ಮನೆ-ಮಠ ಬಿಟ್ಟು 3 ಕಿ.ಮೀ. ಮಕ್ಕಳನ್ನ ಹೆಗಲ ಮೇಲಾಕ್ಕೊಂಡ್ ಬಂದು ನಿರಾಶ್ರಿತ ಕೇಂದ್ರ ಸೇರಿದರು. 2 ತಿಂಗಳ ಬಳಿಕ ಮನೆ ಸೇರಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಎದುರಾಗಿದ್ದೆ ಕಣ್ಣಿಗೆ ಕಾಣದ ನರಹಂತಕ ಕೊರೊನಾ. ತಿಂಗಳಿಂದ ದುಡಿಮೆ ಇಲ್ಲ. ಕೆಲಸಕ್ಕೆ ಹೋಗಂಗಿಲ್ಲ. ತುತ್ತು ಅನ್ನಕ್ಕಾಗಿ ಪರದಾಡಿದ ಪರಿಪಾಟಲು ಅಷ್ಟಿಷ್ಟಲ್ಲ. ಮಕ್ಕಳನ್ನೂ ಸಂಭಾಳಿಸಬೇಕು. ಅವರ ಹೊಟ್ಟೆ ತುಂಬಿಸಬೇಕು. ತೋಳಲ್ಲಿ ಶಕ್ತಿ ಇದೆ. ದುಡಿಯೋ ಚೈತನ್ಯ-ಹುಮ್ಮಸ್ಸು ಎರಡೂ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸಕ್ಕೆ ಹೋಗಂಗಿಲ್ಲ. ಸಂಪಾದನೆಯೂ ಇಲ್ಲ. ಹಾಗಾಗಿ ಚಿಂತಾಕ್ರಾಂತನಾಗಿದ್ದ ಸುಂದರ್ ಇದೀಗ, ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈ, ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆ ತಾಯಿ ಮಕ್ಕಳ ನೋಡ್ತಾಳೋ, ಗಂಡನ ನೋಡ್ತಾಳೋ, ದುಡಿಯುತ್ತಾಳೋ ಯಾವುದೊಂದು ಅಸಾಧ್ಯ. ಇದರಿಂದಾಗಿ ಬಾಗಿಲ ಹೊಸ್ತಿಲ ಬಳಿ ನಿಂತು ದಾನಿಗಳ ದಾರಿ ಕಾಯ್ತಿದ್ದಾರೆ ಆ ತಾಯಿ.
ಒಂದೆಡೆ ಕಲ್ಲಿನ ದೇವರು ಕಲ್ಲೇ ಅನ್ನೋದಕ್ಕೆ ಸಾಕ್ಷಿ. ಮತ್ತೊಂದೆಡೆ ವಿಧಿಗೆ ಸೆಡ್ಡು ಹೊಡೆದಿದ್ದವರ ಬದುಕಿನ ಮೇಲೆ ವಿಧಿಯ ಮತ್ತೊಂದು ಸವಾರಿ. ಮಗದೊಡೆ ಬದುಕು, ಬದುಕುವ ಆಸೆಯನ್ನ ಕಿತ್ತು ತಿನ್ನುಂತಿರೋ ಕೊರೊನಾ. ಈ ಕುಟುಂಬ ಸ್ಥಿತಿ ನಮ್ಮ ಶತ್ರುಗೂ ಬರಬಾರದರು. ವಯಸ್ಸಿಗೆ ಬಂದ ಮಕ್ಕಳಲ್ಲಿ ಚೈತನ್ಯವಿಲ್ಲ. ದುಡಿಯೋ ಅಪ್ಪನ ತೋಳ ರಟ್ಟೆಯಲ್ಲಿ ಶಕ್ತಿ ಇಲ್ಲ. ಮಕ್ಕಳು-ಗಂಡನ ಸಾಕೋ ಹಠವಿರೋ ಅಮ್ಮನಿಗೆ ಪರಿಸ್ಥಿತಿ-ವಯಸ್ಸು ಎರಡೂ ಸಪೋರ್ಟ್ ಮಾಡುತ್ತಿಲ್ಲ. ಹಾಗಾಗಿ ಕಣ್ಣೀರಲ್ಲೇ ಕೈ ತೊಳೆಯುತ್ತಿರೋ ಈ ಕುಟುಂಬಕ್ಕೆ ತುಂಬು ಹೃದಯದ ದಾನಿಗಳ ನೆರವು ಬೇಕಿದೆ.