ಚಿಕ್ಕಮಗಳೂರು: ಮಣ್ಣಿನ ಮಕ್ಕಳು ಎಂದು ಪೇಟೆಂಟ್ ಹಾಕಿಕೊಂಡೇ ಹುಟ್ಟಿರೋರಿಗೆ ಅಬಕಾರಿ, ಇಂಧನ, ಲೋಕೋಪಯೋಗಿ ಇಲಾಖೆಗಳೇ ಏಕೆ ಬೇಕು ಅಂತ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಮಣ್ಣಿಗೂ ಈ ಖಾತೆಗೂ ಏನು ಸಂಬಂಧ ಅನ್ನೋದು ನನಗೆ ಅರ್ಥವಾಗದೇ ಇರುವ ಸಂಗತಿಯಾಗಿದೆ. ಮಣ್ಣಿನ ಮಕ್ಕಳಿಗೆ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಸಣ್ಣ ನೀರಾವರಿ ಖಾತೆಗಳು ಬೇಡ ಅಂತ ಹೇಳಿ ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಜನಪರ, ಕಾಳಜಿಯುಳ್ಳ ಯೋಜನೆಯಲ್ಲೂ ಕೂಡ ಸಮನ್ವಯ ತೋರಿಸುತ್ತಿಲ್ಲ. ಬದಲಾಗಿ ಯಾರಿಗೆ ಯಾವ ಖಾತೆ ಎನ್ನುವುದರ ಬಗ್ಗೆ ಮಾತ್ರ ಕಾಳಜಿಯಿದೆ. ಜನರಿಗೆ ಕೊಟ್ಟ ಭರವಸೆಗಳ ಬಗ್ಗೆ ಕಾಳಜಿ ಇದ್ರೆ ಅವರು ಜನಪರ ಯೋಜನೆಗಳನ್ನು ರೂಪಿಸುತ್ತಿದ್ದರು. ಆದ್ರೆ ಈಗ ಅವರಲ್ಲಿ ಜಟಾಪಟಿ ನಡೆಯುತ್ತಿರುವುದು ಜನಪರ ಕಾಳಜಿಯ ಪರ ಅಲ್ಲ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಖಾತೆಗಾಗಿ ನಡೆಯುತ್ತಿರೋ ಕಿತ್ತಾಟದ ಬಗ್ಗೆ ಲೇವಡಿ ಮಾಡಿದ್ದಾರೆ.