ಗೋಣಿಚೀಲದಲ್ಲಿ ಬಚ್ಚಿಟ್ಟುಕೊಂಡು ಗ್ರಾಮಕ್ಕೆ ಹೋಗುತ್ತಿದ್ದವರು ಕ್ವಾರಂಟೈನ್ ಘಟಕಕ್ಕೆ ಶಿಫ್ಟ್

Public TV
2 Min Read
CKM 4

– ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದ ಮಾಲೀಕ

ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಪಿಕ್‍ಅಪ್ ವಾಹನದಲ್ಲಿ ಗೋಣಿಚೀಲದೊಳಗೆ ಬಚ್ಚಿಟ್ಟುಕೊಂಡು ಊರಿಗೆ ಹೋಗುತ್ತಿದ್ದ 30ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಘಟಕಕ್ಕೆ ಶಿಫ್ಟ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಕೊರೊನಾ ಆತಂಕದಿಂದ ಇಡೀ ದೇಶವೇ ಕಂಗಾಲಾಗಿದೆ. ಊರಿಗೆ ಹೋಗಲಾಗದೆ ಲಕ್ಷಾಂತರ ಜನ ಇದ್ದಲ್ಲೇ ದಿನ ದೂಡುತ್ತಿದ್ದಾರೆ. ಕೆಲವರು ನಡೆದೇ ಊರು ಸೇರಿದ್ದಾರೆ. ಆದರೆ ಕಳೆದ ಹತ್ತು ದಿನಗಳಿಂದ ಮಾಲೀಕನೂ ಕೈ ಬಿಟ್ಟು, ಕೂಲಿಯೂ ಇಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಬಳ್ಳಾರಿ ಜಿಲ್ಲೆಯ ಹಗರಿಮೊಮ್ಮನಹಳ್ಳಿ ಮೂಲದ 30ಕ್ಕೂ ಹೆಚ್ಚು ಕಾರ್ಮಿಕರು ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಬಂದಿದ್ದ ಪಿಕ್‍ಅಪ್ ವಾಹನದಲ್ಲಿ ಹೋಗಲು ಯತ್ನಿಸಿದ್ದರು.

Lockdown

ಈ ಕೂಲಿ ಕಾರ್ಮಿಕರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಎಸ್ಟೇಟ್‍ವೊಂದರಲ್ಲಿ ಮೆಣಸು ಕೊಯ್ಯುವುದಕ್ಕೆ ಬಂದಿದ್ದರು. ಮೆಣಸನ್ನು ಕೊಯ್ದ ಬಳಿಕ ತೋಟದ ಮಾಲೀಕ ಕೆಲಸ ಮುಗಿತು ನೀವು ಹೊರಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಬೇರೆ ಕೆಲಸದವರು ಬರುತ್ತಾರೆ ಲೈನ್ ಮನೆ ಖಾಲಿ ಮಾಡಿ ಎಂದು ಸೂಚಿಸಿದ್ದರು. ಅದೇ ಆತಂಕದಲ್ಲಿದ್ದ ಕಾರ್ಮಿಕರು ಮಕ್ಕಳು-ಮರಿಗಳ ಜೊತೆ ಲೈನ್ ಮನೆಯಲ್ಲಿ ದಿನ ದೂಡುತ್ತಿದ್ದರು. ತೋಟದ ಮಾಲೀಕ ಹೋಗುತ್ತಿರೋ ಇಲ್ಲೋ ನಾನೇ ಹೊರ ಹಾಕಬೇಕೋ ಎಂದು ಗದರಿದ್ದಕ್ಕೆ ಊರಿಗೆ ಹೋಗಲು ಪಿಕ್‍ಅಪ್ ವಾಹನದಲ್ಲಿ ಕುರಿಯಂತೆ ಕದ್ದು ಕೂತು ಬಳ್ಳಾರಿಗೆ ಹೊರಟಿದ್ದರು.

money 1 1

ಬೇಲೂರು ಚೆಕ್‍ಪೋಸ್ಟ್ ದಾಟಿ ಚಿಕ್ಕಮಗಳೂರಿಗೆ ಬರ್ತಿದ್ದಂತೆ ನಗರ ಪೊಲೀಸರು ಗಾಡಿಯನ್ನ ಚೆಕ್ ಮಾಡಿದಾಗ ಎಲ್ಲರೂ ಸಿಕ್ಕಿದ್ದಾರೆ. ಇದೀಗ ಎಲ್ಲರನ್ನೂ ನಗರದ ನರಿಗುಡ್ಡನಹಳ್ಳಿಯ ಬಳಿ ಇರುವ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಆದರೆ ಬೆಂಗಳೂರಿನಲ್ಲಿ ವೈದ್ಯನಾಗಿರುವ ತೋಟದ ಮಾಲೀಕ ಕೂಲಿ ಕಾರ್ಮಿಕರಿಗೆ ಹಣವನ್ನೂ ನೀಡಿಲ್ಲ. ಕಳೆದ ಎಂಟತ್ತು ದಿನಗಳಿಂದ ಊಟದ ವ್ಯವಸ್ಥೆಯನ್ನೂ ಮಾಡಿಲ್ಲ. ಇವರೇ ಅಡುಗೆ ಮಾಡಿಕೊಳ್ಳಲು ತೋಟದಲ್ಲಿ ಸ್ವಲ್ಪ ಸೌಧೆಯನ್ನ ಬಳಸಿಕೊಂಡಿದ್ದಕ್ಕೆ ಐದು ಸಾವಿರ ರೂ. ಕೂಲಿ ಹಣದಲ್ಲಿ ಮುರಿದು ಕೊಟ್ಟಿದ್ದಾರೆ ಎಂದು ಕೂಲಿ ಕಾರ್ಮಿಕರು ದೂರಿದ್ದಾರೆ.

ಪಿಕ್‍ಅಪ್ ವಾಹನದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜನರಿದ್ದರು. ಅವರೆಲ್ಲಾರಿಗೂ ಚಿಕ್ಕಮಗಳೂರು ಜಿಲ್ಲಾಡಳಿತ ವಸತಿ-ಊಟದ ಸೌಲಭ್ಯ ಕಲ್ಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *