– ಮಳೆಗಾಗಿ ಋಷ್ಯಶೃಂಗೇಶ್ವರನಿಗೆ 63 ಹಳ್ಳಿಗರು ಪೂಜೆ ಸಲ್ಲಿಸಿದ್ರು
ಚಿಕ್ಕಮಗಳೂರು: ಮಳೆಗಾಗಿ ವರುಣ ದೇವರೆಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ರಾಜ್ಯದ ವಿವಿಧ ಭಾಗದ ಜನರು ಮೊರೆ ಹೋಗಿದ್ದರು. ಆದರೆ ಈಗ ವರುಣ ಭಾರೀ ಅವಾಂತರ ಸೃಷ್ಟಿಸುತ್ತಿರುವುದಿಂದ ಆಡಳಿತ ಮಂಡಳಿಯು ಪರ್ಜನ್ಯ ಜಪ ನಿಲ್ಲಿಸಿದೆ.
ಮಳೆಗಾಗಿ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ನಾಲ್ಕು ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳ 63 ಹಳ್ಳಿಗರು ವಿಶೇಷ ಪೂಜೆ ಸಲ್ಲಿಸಿದ್ದರು. ಚಿತ್ರದುರ್ಗ, ದಾವಣಗೆರೆ, ಧಾರವಾಡದಿಂದಲೂ ಬಂದಿದ್ದ ಭಕ್ತರು ಮಳೆಗಾಗಿ ಪರ್ಜನ್ಯ ಜಪ ಮಾಡಿಸಿದ್ದರು. ಈ ಪೂಜೆಯ ಫಲ ಎಂಬಂತೆ ಋಷ್ಯಶೃಂಗೇಶ್ವರನ ಶಕ್ತಿಯಿಂದ ಇಂದು ಕರ್ನಾಟಕವೇ ಜಲಾವೃತವಾಗಿದೆ.
ಮಳೆಯ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಹರಿಯುವ ಹೆಚ್ಚಿನ ನದಿಗಳು, ಹಳ್ಳಗಳು ಪ್ರವಾಹದ ಮಟ್ಟ ಮೀರಿವೆ. ಹೀಗಾಗಿ ಕಿಗ್ಗಾ ದೇವಸ್ಥಾನದ ಆಡಳಿತ ಮಂಡಳಿಯು ಪರ್ಜನ್ಯ ಜಪ ನಿಲ್ಲಿಸಿದೆ. ಈ ನಿಟ್ಟಿನಲ್ಲಿ ಆಗಸ್ಟ್ 12 ರ ಒಳಗಾಗಿ ಮಳೆ ನಿಲ್ಲಿಸುವಂತೆ ಋಷ್ಯಶೃಂಗೇಶ್ವರನಿಗೆ ಭಕ್ತರು ಸಂಕಲ್ಪ ಮಾಡಿದ್ದಾರೆ. ಮಳೆ ನಿಂತರೆ ಆಗಸ್ಟ್ 19ರಂದು ಸಂಕಲ್ಪದ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಭಕ್ತರು ಬೇಡಿಕೊಂಡಿದ್ದಾರೆ.
ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಈಗಾಗಲೇ 8 ಜನರು ಜಲಾಸುರನಿಗೆ ಬಲಿಯಾಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಜೋರಾಗಿದ್ದು, ನಿಧಾನವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕಡೆ ಕರೆಂಟ್ ವ್ಯತ್ಯಯವಾಗಿದ್ದು, ಸುತ್ತಲೂ ನೀರಿದ್ದರೂ ಕುಡಿಯುವುದಕ್ಕೆ ನೀರು ಇಲ್ಲದಂತಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಜೊತೆಗೆ ಸಿನಿಮಾ ನಟರು, ಸೆಲೆಬ್ರೆಟಿಗಳು ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಮುಂದಾಗಿದ್ದಾರೆ.