ಚಿಕ್ಕಮಗಳೂರು: ಪಾಸ್‍ಪೋರ್ಟ್ ಪರಿಶೀಲನೆಗೆ ಲಂಚ ಪಡೆದ ಪೇದೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಈ ತೀರ್ಪನ್ನ ಪ್ರಕಟಿಸಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಮಕ್ಕಿ ಗ್ರಾಮದ ಅಜಿತ್ ಎಂಬವರು ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ಗೋಣಿಬೀಡು ಠಾಣೆಗೆ ಕಳುಹಿಸಲಾಗಿತ್ತು. ಗೋಣಿಬೀಡು ಪೊಲೀಸ್ ಠಾಣಾ ಪೇದೆ ಗಿರೀಶ್ ಕುಮಾರ್ ವರದಿನೀಡಲು 3 ಸಾವಿರ ಲಂಚ ಕೊಡುವಂತೆ ಅರ್ಜಿದಾರ ಅಜಿತ್‍ಗೆ ಆಗ್ರಹಿಸಿ, ಕೊನೆಗೆ 2,500 ರೂ. ಹಣವನ್ನು ನೀಡಿ ಎಂದಿದ್ದರು.
Advertisement
Advertisement
ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಮೇ 28 2013ರಂದು ಗೋಣಿಬೀಡಿನ ರಾಮೇಶ್ವರ ಬೇಕರಿ ಬಳಿ ಪೇದೆ ಗಿರೀಶ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಉಮೇಶ್.ಎಂ.ಅಡಿಗ ಆರೋಪಿ ಗಿರೀಶ್‍ಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್ ವಾದ ಮಂಡಿಸಿದರು.