– ಬಂದ್ರು ಹೋದ್ರು: ಸಿಎಂ ವಿರುದ್ಧವೂ ಕಿಡಿ
ಚಿಕ್ಕಮಗಳೂರು: ನೆರೆ ಸಂತ್ರಸ್ತರೊಬ್ಬರು ಸಿಎಂ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ನಡೆಯಿತು.
ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಯಡಿಯೂಪ್ಪ ಅವರು ನೆರೆ ಹಾನಿ ಪ್ರದೇಶ ವೀಕ್ಷಿಸಿದರು. ಈ ವೇಳೆ ಮೇಗೂರ್ ಗ್ರಾಮದ ಜಯಂತ್ ಅವರು, ಭಾರೀ ಮಳೆಯಿಂದಾಗಿ ನಮ್ಮ ಗ್ರಾಮದಲ್ಲಿ 12 ಮನೆಗಳು ಬಿದ್ದಿವೆ. ಇಲ್ಲಿವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಅವರು ನಮ್ಮ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಮಲೆಮನೆಯಲ್ಲಿ ಕೇವಲ 8 ಮನೆಗಳು ಮಾತ್ರ ಮಳೆಗೆ ಹಾನಿಯಾಗಿವೆ. ಗದ್ದೆ, ಬೆಳೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ನಮ್ಮ ಗ್ರಾಮದಲ್ಲಿ 12 ಮನೆಗಳು ಬಿದ್ದಿವೆ. ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇಲ್ಲಿವರೆಗೂ ಯಾವ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಮಲೆಮನೆಗೆ ಸಚಿವರಾದ ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಿಎಂ ಕುಮಾರಸ್ವಾನಿ ಸೇರಿದಂತೆ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಆದರೆ ನಮ್ಮ ಗ್ರಾಮಕ್ಕೆ ಯಾವುದೇ ನಾಯಕರು ಬರಲಿಲ್ಲ. ಇಲ್ಲಿವರೆಗೂ ಯಾವುದೇ ಪರಿಹಾರ ಸಾಮಗ್ರಿ ನೀಡಿಲ್ಲ. ನೆರೆ ವೀಕ್ಷಣೆಗೆ ಬಂದವರೆಲ್ಲ ಮಲೆಮನೆಗೆ ಮಾತ್ರ ಭೇಟಿ ನೀಡಿ ಹಿಂತಿರುಗುತ್ತಾರೆ. ಮೇಗೂರ್ ಗ್ರಾಮಕ್ಕೆ ಬಾರದಂತೆ ಕೆಲವರು ದಾರಿತಪ್ಪಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಜಯಂತ್ ಅವರು, ಹಳ್ಳ ಬಂದು ಮೇಗೂರ್ ಗ್ರಾಮದ 13 ಮನೆಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವಿದ್ಯುತ್ ಕಡಿತವಾಗಿದೆ. ರಸ್ತೆ ಸಂಪರ್ಕವಿಲ್ಲ. ನಮ್ಮ ಕಷ್ಟವನ್ನು ಐದು-ಹತ್ತು ನಿಮಿಷದಲ್ಲಿ ಹೇಳಿಕೊಳ್ಳುವುದಕ್ಕೆ ಆಗುತ್ತಾ? ಸಿಎಂ ಬಂದ್ರು ಹತ್ತೇ ನಿಮಿಷದಲ್ಲಿ ಮಲೆಮನೆಯಿಂದ ವಾಪಸ್ ಹೋದರು. ನಮ್ಮ ಗ್ರಾಮಕ್ಕೆ ಬರಲೇ ಇಲ್ಲ. ಅವರಿಗೆ ಅವಸ ಏನು ಇತ್ತೋ ಏನೋ ಹೋಗಿ ಬಿಟ್ಟರು ಎಂದು ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು.