ಚಿಕ್ಕಮಗಳೂರು: ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ಭಕ್ತರ ಜೊತೆ ಶ್ವಾನವೊಂದು 480 ಕಿ.ಮೀ ದೂರದಿಂದ ನಡೆದುಕೊಂಡು ಬರುತ್ತಿದೆ.
ಆಕ್ಟೋಬರ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಆರು ಜನ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ತಿರುಪತಿಯ ತಿರುಮಲದಿಂದ ಬರಿಗಾಲಿನಲ್ಲಿ ಪಾದಯಾತ್ರೆ ಶುರು ಮಾಡಿದ್ದಾರೆ. ಈ ವೇಳೆ ಇವರ ಜೊತೆ ಸೇರಿಕೊಂಡಿರುವ ನಾಯಿಯೊಂದು 480 ಕಿ.ಮೀ ನಡೆದು ಭಾನುವಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರ ತಲುಪಿದೆ.
ನಾಯಿಯ ಅಯ್ಯಪ್ಪ ಮೇಲಿನ ಭಕ್ತಿ ಕಂಡು ಬೆರಗಾಗಿರುವ ಅಯ್ಯಪ್ಪನ ಭಕ್ತರು ಅವರ ಜೊತೆ ಈ ನಾಯಿಯನ್ನು ಅಯ್ಯಪ್ಪನ ಸನ್ನಿಧಿಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದಾರೆ. ಅದರಂತೆ ಅವರ ಜೊತೆ 480 ಕಿ.ಮೀ ಬಂದಿರುವ ನಾಯಿಗೆ ರಸ್ತೆ ಮಧ್ಯೆ ಕಾಲಿಗೆ ಕೆಲ ಗಾಯಗಳಾಗಿವೆ. ಆಗ ಹತ್ತಿರದ ಪಶುವೈದ್ಯರ ಬಳಿ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಅಯ್ಯಪ್ಪನ ಭಕ್ತರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಅಯ್ಯಪ್ಪನ ಭಕ್ತರು, ನಾವು ಪ್ರತಿ ವರ್ಷ ಪಾದಯಾತ್ರೆ ಮಾಡುತ್ತೇವೆ. ಆದರೆ ಈ ವರ್ಷ ಇದು ಹೊಸ ಅನುಭವದ ರೀತಿ ಇದೆ. ಮೊದಲು ನಾವು ಈ ಶ್ವಾನವನ್ನು ಗಮನಿಸಿರಲಿಲ್ಲ. ಬಹಳ ಮುಂದೆ ನಡೆದುಕೊಂಡು ಬಂದ ನಂತರ ಗಮನಿಸಿದ್ದೇವೆ. ನಾಯಿಗೆ ಅಯ್ಯಪ್ಪನ ಮೇಲಿರುವ ಭಕ್ತಿಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.