ವಿವಾದದ ಮಧ್ಯೆ ಕಾಫಿನಾಡ ಸಾಹಿತ್ಯ ಸಮ್ಮೇಳನ

Public TV
3 Min Read
CKM C

ಚಿಕ್ಕಮಗಳೂರು: ಕನ್ನಡದ ಮನಸ್ಸುಗಳೆಲ್ಲಾ ಸೇರಿ ಒಟ್ಟಾಗಿ ಆಚರಿಸಬೇಕಾದ ಹಬ್ಬ ಸಾಹಿತ್ಯ ಸಮ್ಮೇಳನ. ಜನವರಿ 10ರ ಶುಕ್ರವಾರದಂದು ನಡೆಯಲಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಭಾಗವಹಿಸಿ, ವಿರೋಧಿಸಿದವರು ಮತ್ತೊಮ್ಮೆ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಸಮ್ಮೇಳನದ ದಿನಾಂಕದವರೆಗೂ ಉಪವಾಸ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಭಾಗವಹಿಸುವಂತೆ ಸಚಿವ ಸಿ.ಟಿ ರವಿ ಅವರನ್ನ ಆಮಂತ್ರಿಸಲು ಹೋದಾಗ ಅವರು, ಸಮ್ಮೇಳನಕ್ಕೆ ನಮ್ಮ ಸಹಕಾರವೂ ಇಲ್ಲ, ವಿರೋಧವೂ ಇಲ್ಲ. ನಿಮ್ಮದೊಂದು ಸ್ವಾಯತ್ತ ಸಂಸ್ಥೆ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದರು. ಸರ್ಕಾರದ ಅನುದಾನಕ್ಕೆ ರಾಜ್ಯ ಸಾಹಿತ್ಯ ಪರಿಷತ್‍ನ ಅಧ್ಯಕ್ಷರು, ಉಸ್ತುವಾರಿ ಸಚಿವರ ಪತ್ರ ಕೇಳಿದರು. ಶಿಫಾರಸು ಪತ್ರ ನೀಡಲು ಸಚಿವರು ನಿರಾಶಕ್ತಿ ತೋರಿದ್ದು, ಅನುದಾನ ನೀಡುವುದಿಲ್ಲ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದರು.

CKM B

ದೇಣಿಗೆ ರೂಪದಲ್ಲಿ ಹಣ ಸಂಗ್ರಹ:
ಸಮ್ಮೇಳನಕ್ಕೆ ಸರ್ಕಾರ ನೀಡುವ ಅನುದಾನದ ಬಗ್ಗೆ ಅನುಮಾನವಿದ್ದ ಕಾರಣ ಸಮ್ಮೇಳನದ ಸ್ವಾಗತ ಹಾಗೂ ಉಪ ಸಮಿತಿಗಳು ಈಗಾಗಲೇ 2 ಲಕ್ಷ ರೂಪಾಯಿಗಳನ್ನ ಸಂಗ್ರಹಿಸಿವೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಗತ ಸಮಿತಿಯ ಖಾತೆ ಸಂಖ್ಯೆಯನ್ನ ಹಾಕಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ದೇಣಿಗೆ ರೂಪದಲ್ಲಿ ಹಣವನ್ನ ಖಾತೆಗೆ ವರ್ಗಾಯಿಸುತ್ತಿದ್ದಾರೆ ಹಣದ ಕೊರತೆ ಕಾಡಿಸುವುದಿಲ್ಲ ಎಂದರು.

ಸಮ್ಮೇಳನಕ್ಕೆ ಸಂಘಟನೆಗಳಿಂದ ವಿರೋಧವಿದ್ದು, ಎಸ್‍ಪಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲು ಹೋದಾಗ ಅವರು ರಾಷ್ಟ್ರೀಯ ರಕ್ಷಣೆ ಉದ್ದೇಶಕ್ಕೆ ರಕ್ಷಣೆ ನೀಡಲಾಗುವುದಿಲ್ಲ ಎಂದರು. ಹಾಗಾಗಿ ಐಜಿಪಿ, ಡಿಜಿ ಹಾಗೂ ಎಸ್‍ಪಿಗೆ ನೋಂದಾಯಿತ ಅಂಚೆ ಮೂಲಕ ಮನವಿ ಪತ್ರ ರವಾನಿಸಲಾಗಿದೆ ಎಂದು ಕುಂದೂರು ಅಶೋಕ್ ಹೇಳಿದರು.

Sringeri A

ವಿರೋಧ ಏಕೆ:
ಶೃಂಗೇರಿಯಲ್ಲಿ ಜನವರಿ 10ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಮೂಲತಃ ಶೃಂಗೇರಿಯವರಾದ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತ್ತು. ಆದರೆ ಅವರು ನಕ್ಸಲ್ ಬೆಂಬಲಿಗರೆಂಬ ಆರೋಪದ ಜೊತೆ ಅವರ ಮೇಲೆ ಈ ಹಿಂದೆ ಪ್ರಕರಣಗಳು ಕೂಡ ದಾಖಲಾಗಿದ್ದವು ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ. ಹಾಗಾಗಿ ಸಮ್ಮೇಳನದ ಅಧ್ಯಕ್ಷರನ್ನು ಬದಲಿಸುವಂತೆ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಹಾಗೂ ನಕ್ಸಲ್ ವಿರೋಧಿ ಹೋರಾಟ ಸಮಿತಿ ಸಾಹಿತ್ಯ ಪರಿಷತ್‍ಗೆ ಆಗ್ರಹಿಸಿತ್ತು. ಈ ಕುರಿತು ಶೃಂಗೇರಿಯಲ್ಲಿ ಪ್ರತಿಭಟನೆ ಕೂಡ ನಡೆಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷರ ಪರ-ವಿರೋಧ ಅಭಿಯಾನ ಕೂಡ ಆರಂಭವಾಗಿದೆ. ಇದೀಗ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ಜನವರಿ 10ರಂದು ಶೃಂಗೇರಿ ಬಂದ್‍ಗೂ ಕರೆ ನೀಡಿದ್ದಾರೆ.

CT RAVI

ಅಧ್ಯಕ್ಷರ ವಿರುದ್ಧ ಸಿ.ಟಿ.ರವಿ ಆಕ್ರೋಶ:
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ.ರವಿ ಅವರು, ಇಂದಿನ ಸಮ್ಮೇಳನಾಧ್ಯಕ್ಷರಿಗೆ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅಭಿಪ್ರಾಯ ಕೇಳಿದಾಗ ಪೊಲೀಸ್ ಇಲಾಖೆ ಅವರಿಗಿರುವ ಟ್ರ್ಯಾಕ್ ರೆಕಾರ್ಡ್‍ನ ರಿಪೋರ್ಟ್ ಮಾಡಿ ಕೊಟ್ಟಿದೆ. ಪೊಲೀಸರ ವರದಿಯ ಆಧಾರದ ಮೇಲೆ ಅಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಿಲ್ಲ. ಸಮ್ಮೇಳನಾಧ್ಯಕ್ಷರ ನುಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಬ್ಯಾಡ್ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡವರಿಂದ ಒಳ್ಳೆಯ ಸಂದೇಶದ ನಿರೀಕ್ಷೆ ಹೇಗೆ ಸಾಧ್ಯ ಎಂದು ಹೇಳಿದ್ದಾರೆ.

ನಾನು ಸಚಿವನಾಗಿ, ಸರ್ಕಾರ ನಡೆಸುವವನಾಗಿ ನನ್ನ ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣದಲ್ಲಿ ಸಮ್ಮೇಳನ ನಡೆಯಬೇಕೆಂಬ ಅಪೇಕ್ಷೆ ಇದೆ. ಹಾಗಾಗಿ ಸಮ್ಮೇಳನವನ್ನ ಮುಂದೂಡಿ ಎಂದಿದ್ದೇನೆ. ನೀವು ಅದೇ ದಿನಾಂಕದಂದು ನಡೆಸುತ್ತೀವಿ ಅಂದ್ರೆ ನಮ್ಮ ಸಹಕಾರವಿಲ್ಲ ಎಂದು ಒಂದೂವರೆ ತಿಂಗಳ ಹಿಂದೆ ಸ್ಪಷ್ಟಪಡಿಸಿದ್ದೇನೆ. ನಾನು ಬರುವುದಿಲ್ಲ, ಯಾವುದೇ ರೀತಿಯ ಸಹಕಾರದ ನಿರೀಕ್ಷೆಯನ್ನೂ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *