ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.
ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.
2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.