ಚಿಕ್ಕಮಗಳೂರು: ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವ ಚಿಕ್ಕಮಗಳೂರು (Chikkamagaluru) ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಮೃತ ಯುವಕನನ್ನು ಮೂಲತಃ ಶಿವಮೊಗ್ಗದ ಭದ್ರಾವತಿಯ ಮಧು ಎಂದು ಗುರುತಿಸಲಾಗಿದ್ದು, ಕಾರು ಡ್ರೈವರ್ ಆಗಿದ್ದ ಹಾಗೂ ಯುವತಿಯನ್ನು ಪೂರ್ಣಿಮಾ ಎಂದು ತಿಳಿಯಲಾಗಿದ್ದು, ಮಾಗಡಿಯ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಮಧು ರಾಮನಗರದ ಮಾಗಡಿಯಲ್ಲಿ ಕಾರು ಡ್ರೈವ್ ಮಾಡಿಕೊಂಡು ಕಳೆದ ನಾಲ್ಕೈದು ವರ್ಷಗಳಿಂದ ಪೂರ್ಣಿಮಾ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಪೂರ್ಣಿಮಾ ಕುಟುಂಬದ ಜೊತೆ ವಿಶ್ವಾಸ-ಸ್ನೇಹ ಇತ್ತು. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮಧು ಭಾಗವಹಿಸುತ್ತಿದ್ದ. ಕಳೆದ ಏಳೆಂಟು ತಿಂಗಳ ಹಿಂದೆ ಪೂರ್ಣಿಮಾ ತಂಗಿಯ ಮದುವೆಯಾಗಿತ್ತು. ಆ ಮದುವೆಯಲ್ಲೂ ಮಧು ಭಾಗಿಯಾಗಿ ಎಲ್ಲಾ ಕೆಲಸ ಮಾಡಿದ್ದನು. ಮದುವೆಗೆ ಈತನ ಕಾರನ್ನ ಬಾಡಿಗೆ ಪಡೆದಿದ್ದರು.ಇದನ್ನೂ ಓದಿ: ಎಲ್ಲೋ ಜೋಗಪ್ಪ ನಿನ್ನರಮನೆ – ಭರತನಾಟ್ಯ ಪ್ರವೀಣೆಗೊಲಿದ ಚೆಂದದ ಪಾತ್ರ!
ಇನ್ನೂ ಪೂರ್ಣಿಮಾಳಿಗೆ ಮಧು ಹಾಗೂ ಆತನ ಕುಟುಂಬಸ್ಥರ ಜೊತೆಯೂ ಅವಿನಾಭಾವ ಸಂಬಂಧವಿತ್ತು. ಈ ಹಿಂದೆ ಪೂರ್ಣಿಮಾ ಶಿವಮೊಗ್ಗಕ್ಕೆ ಬಂದಾಗ ಮಧು ಮನೆಗೂ ಹೋಗಿದ್ದಳು. ಮಧು ತಾಯಿ-ತಂಗಿ ಜೊತೆಯೂ ಆತ್ಮೀಯವಾಗಿ ಇದ್ದಳು. ಆಗಾಗ್ಗೆ ಫೋನಿನಲ್ಲೂ ಕೂಡ ಮಾತನಾಡುತ್ತಿದ್ದಳು ಎಂದು ಮೃತ ಮಧು ತಂಗಿ ಸಿಂಧು ಹೇಳಿದ್ದಾರೆ.
ಬುಧವಾರ ಸಂಜೆ ಶಾಲೆ ಮುಗಿಸಿ ಪೂರ್ಣಿಮಾ ಮನೆಗೆ ಬರುತ್ತಿದ್ದಾಗ, ಶಾಲೆಯಿಂದ 20 ಕಿ.ಮೀ. ದೂರದ ಊರಿಗೆ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಚಿಕ್ಕಮಗಳೂರಿಗೆ ಬಂದಿದ್ದಾನೆ. ಈ ವೇಳೆ ಯುವತಿಯನ್ನು ಕೊಲೆ ಮಾಡಿದ್ದು, ಯುವತಿಯ ಕುತ್ತಿಗೆ ಮೇಲೆ ಕತ್ತು ಹಿಸುಕಿರುವ ಗುರುತುಗಳು ಪತ್ತೆಯಾಗಿವೆ. ಆದರೆ ಮಾರ್ಗಮಧ್ಯೆಯೇ ಕೊಲೆ ಮಾಡಿದ್ದನೋ ಅಥವಾ ಚಿಕ್ಕಮಗಳೂರಿಗೆ ಬಂದು ಕೊಲೆ ಮಾಡಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ. ಬಳಿಕ ಯುವತಿಯ ಮೃತದೇಹವನ್ನು ಬೀಸಾಡಲು ಪ್ರಯತ್ನಿಸಿದ್ದು, ದಾಸರಹಳ್ಳಿಯ ಕಾಫಿ ತೋಟದ ಒಳ ಭಾಗದಲ್ಲೆಲ್ಲಾ ಓಡಾಡಿದ್ದಾನೆ. ಮತ್ತೆ ವಾಪಸ್ ಬಂದು ಮುಖ್ಯರಸ್ತೆಯಿಂದ 1 ಕಿ.ಮೀ. ಒಳ ಭಾಗದಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ, ಪಕ್ಕದಲ್ಲೇ ಇದ್ದ ಮರಕ್ಕೆ ಪೂರ್ಣಿಮಾಳ ವೇಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಮೇಲ್ನೋಟಕ್ಕೆ ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯನ್ನ ಕೊಲೆ ಮಾಡಿ, ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆ ಮುಂಭಾಗದಲ್ಲಿ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ಕೈಗೊಂಡಿರುವ ಪೊಲೀಸರು ಅವಳು ಎಲ್ಲಿ ಸತ್ತಿದ್ದಾಳೆ? ಆಕೆ ಕತ್ತಿನ ಮೇಲೆ ಇರುವ ಗುರುತು ಆತನದ್ದೇನಾ? ಅಥವಾ ಬೇರೆಯವರದ್ದಾ? ಪೂರ್ಣಿಮಾ ಮೈಮೇಲೆ ಇದ್ದ ಒಡವೆಗಳು ಏನಾದವು? ಮಧು ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡನಾ? ಎಂದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ