ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನು ಸೃಷ್ಟಿಸುತ್ತಿದೆ. ಪದೇ ಪದೇ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಆಗಸ್ಟ್ 14 ರವರೆಗೆ ದತ್ತಪೀಠ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ರಸ್ತೆಗಳಲ್ಲಿ ಜಿಲ್ಲಾಡಳಿತ ವಾಹನ ಸಂಚಾರ ನಿಷೇಧಿಸಿದೆ.
ಗಿರಿಪ್ರದೇಶದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 14ರವರೆಗೆ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶಿಸಿದ್ದಾರೆ. ಅತ್ತ ಮಳೆಯೂ ನಿಲ್ಲುತ್ತಿಲ್ಲ, ಇತ್ತ ಗುಡ್ಡ ಕುಸಿತವಾಗುವುದು ಕೂಡ ಹೆಚ್ಚಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಈ ಮೂರು ಮಾರ್ಗಗಳ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.
ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ವರುಣ ಇಲ್ಲಿಯ ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಾನೆ. ಅಲ್ಲದೆ ಎಲ್ಲೆಂದರಲ್ಲಿ ಪದೇ ಪದೇ ಗುಡ್ಡಗಳು ಕುಸಿದು ಬೀಳುತ್ತಿವೆ. ಇದರಿಂದ ಜಿಲ್ಲೆಯ ಹಲವು ಮಾರ್ಗದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಗುಡ್ಡ ಕುಸಿತಕ್ಕೆ ಮನೆಗಳು, ಕಾಫಿ ತೋಟಗಳು ನೆಲಸಮವಾಗಿದೆ. ಇದರಿಂದ ಜನರು ಕಂಗಾಲಾಗಿದ್ದು, ಯಾವಾಗ ಏನಾಗತ್ತೋ ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ.