ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ

Public TV
2 Min Read
ckm court Rape case

ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷಿ ವಿಧಿಸಿದೆ.

ಜಿಲ್ಲೆಯ ಶೃಂಗೇರಿಯಲ್ಲಿ 2016ರ ಫೆಬ್ರವರಿ 16ರಂದು ನಡೆದಿದ್ದ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲು ದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನು ಪ್ರದೀಪ್ ಹಾಗೂ ಸಂತೋಷ್ ಎಂಬವರು ಅತ್ಯಾಚಾರಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ದರು. ಇದರಿಂದಾಗಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸುವುದಕ್ಕೆ ಹೆತ್ತವರು ಹಿಂದೇಟು ಹಾಕಿದ್ದರು. ಆದರೆ ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಿಂದ 25 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ. ದಂಡವನ್ನೂ ವಿಧಿಸಿದೆ.

court hammer

ಏನಿದು ಪ್ರಕರಣ?:
ಕೊಲೆಯಾದ ವಿದ್ಯಾರ್ಥಿನಿ ಶೃಂಗೇರಿಯಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ತಂದೆ ನಿತ್ಯವೂ ತಮ್ಮ ಬೈಕ್‍ನಲ್ಲಿ ಕಾಲೇಜಿಗೆ ಬಿಟ್ಟು, ಸಂಜೆ ಕರೆದುಕೊಂಡು ಹೋಗುತ್ತಿದ್ದರು. 2016ರ ಫೆಬ್ರವರಿ 16ರಂದು ಪರೀಕ್ಷೆ ಬೇಗ ಮುಗಿದಿದ್ದರಿಂದ ಮುಂದಿನ ಪರೀಕ್ಷೆಗೆ ಓದಬೇಕೆಂದು ವಿದ್ಯಾರ್ಥಿನಿ ಕಾಲು ದಾರಿ ಹಿಡಿದು ಗ್ರಾಮಕ್ಕೆ ಹೋಗುತ್ತಿದ್ದಳು. ಈ ವೇಳೆ ಪ್ರದೀಪ್ ಹಾಗೂ ಸಂತೋಷ್ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದರು. ಬಳಿಕ ಗಿಡಗಂಟೆಗಳಿಂದ ತುಂಬಿದ್ದ 50 ಅಡಿಯ ಪಾಳು ಬಾವಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಎಸೆದಿದ್ದರು.

ವಿದ್ಯಾರ್ಥಿನಿ ನಾಪತ್ತೆ ಪ್ರಕಣದ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಹೀಗಾಗಿ ಇಬ್ಬರು ಆರೋಪಿಗಳಲ್ಲಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ, ಮತ್ತೋರ್ವ ಪೊಲೀಸರ ಅತಿಥಿಯಾಗಿದ್ದ. ಈ ಪ್ರಕರಣ ಹೊರತುಪಡಿಸಿಯೂ ಇಬ್ಬರ ಮೇಲೂ ಹಲವು ಕೇಸ್‍ಗಳಿದ್ದರು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಆರೋಪ ಕೃತ್ಯ ಸಾಬೀತಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಸತ್ಯ ನ್ಯಾಯಾಲಯ ಇಬ್ಬರಿಗೂ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ckm court Rape case A 3

ಇವತ್ತು ಕಣ್ತುಂಬ ನಿದ್ದೆ ಮಾಡ್ತೀನಿ:
ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ ಮಾತನಾಡಿ, ಇವತ್ತು ಕಣ್ತುಂಬ ನಿದ್ದೆ ಮಾಡುತ್ತೇನೆ ಎಂದು ಮಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ಇಬ್ಬರು ಆರೋಪಿಗಳಿಗೂ ನೇಣಿಗೆ ಹಾಕಬೇಕೆಂದು ಊರಿನ ಜನ ಹಾಗೂ ಯುವತಿಯ ಹೆತ್ತವರು ಆಗ್ರಹಿಸಿದರು. ಇಂದು ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್ ನಲ್ಲಿದ್ದ ವಿದ್ಯಾರ್ಥಿನಿಯ ತಂದೆ ನನಗೆ ಸಂತೋಷ ಹಾಗೂ ತೃಪ್ತಿಯಾಯಿತು ಎಂದು ಮಗಳನ್ನ ನೆನೆದು ಭಾವುಕರಾದರು. ನಾಲ್ಕು ವರ್ಷದಿಂದ ಕಣ್ತುಂಬ ನಿದ್ದೆ ಮಾಡಿರಲಿಲ್ಲ. ಇವತ್ತು ಕಣ್ತುಂಬ ನಿದ್ದೆ ಮಾಡ್ತೀನಿ. ನನಗೆ ಬಂದ ಸ್ಥಿತಿ ಬೇರ್ಯಾರಿಗೂ ಬಾರಬಾರ್ದು ಎಂದು ಮಗಳ ನೆನೆದು ಕಣ್ಣೀರಿಟ್ಟರು. ಕೋರ್ಟ್ ತೀರ್ಪಿನಿಂದ ಊರಿನ ಜನರೂ ಸಂತೋಷಪಟ್ಟಿದ್ದಾರೆ.

2016 ಫೆಬ್ರವರಿ 16ರಂದು ಯುವತಿಯ ಮೃತದೇಹವಿದ್ದ ಜಾಗದಲ್ಲಿ ಮಧ್ಯಾಹ್ನ 1ರಿಂದ 2ರವರೆಗೆ ಸಂತೋಷ್ ಹಾಗೂ ಪ್ರದೀಪ್ ಇದ್ದದ್ದನ್ನ ಗಮನಿಸಿದ್ದ ಇಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಅಷ್ಟೇ ಅಲ್ಲದೆ ಅಪರಾಧಿಗಳಲ್ಲಿ ಸಂತೋಷ್ ಎಂಬಾತ ತಾನು ಈ ರೀತಿ ಮಾಡಿದ್ದೇನೆಂದು ಆತನ ಆಪ್ತನ ಬಳಿ ಹೇಳಿದ್ದನ್ನು ಪರಿಗಣಿಸಿ ಪೊಲೀಸರು ಇಬ್ಬರ ವಿರುದ್ಧ ತಿನಿಖೆ ಆರಂಭಿಸಿದ್ದರು. ಎಲ್ಲಾ ದಾಖಲೆಗಳನ್ನು ಕಲೆಹಾಕಿದ ಪೊಲೀಸರು ಅಪರಾಧಿಗಳನ್ನು ಜೈಲಿಗಟ್ಟಿದ್ದರು.

ckm court Rape case A 4

ಈ ಪ್ರಕರಣ ಸಂಬಂಧ ಅಂದಿನ ಶೃಂಗೇರಿ ಸಬ್ ಇನ್ಸ್‍ಪೆಕ್ಟರ್ ಸುದೀರ್ ಹೆಗ್ಡೆ ತನಿಖೆ ನಡೆಸಿದ್ದರು. ಮೃತ ಯುವತಿಯ ಪರ ಸರ್ಕಾರಿ ಅಭಿಯೋಜಕ ಯಳಗೇರಿ ವಾದ ಮಂಡಿಸಿದ್ದರು. ಎಲ್ಲಾ ದಾಖಲೆಗಳನ್ನ ಪರಿಗಣಿಸಿ ನ್ಯಾಯಮೂರ್ತಿ ಉಮೇಶ್ ಎಂ ಅಡಿಗೆ ತೀರ್ಪು ಪ್ರಕಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *