ಚಿಕ್ಕಮಗಳೂರು: ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಭೀತಿಗೆ ಜನ ಮನೆಯಿಂದ ಹೊರಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಈಗಾಗಲೇ ಕೆಎಫ್‍ಡಿ ಭಯದಿಂದ ಕಂಗಲಾಗಿರೋ ಮಲೆನಾಡಿಗರಲ್ಲಿ ಮಹಾಮಾರಿ ಕೊರೊನಾ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಹೀಗಿರುವಾಗ ಹಳ್ಳಿ ಬಿಟ್ಟು ವರ್ಷವಾಗಿದ್ದ ಜನ ಕೊರೊನಾ ವೈರಸ್‍ಗೆ ಹೆದರಿ ಮತ್ತೆ ಹಳ್ಳಿಗಳತ್ತ ಮುಖ ಮಾಡ್ತಿದ್ದಾರೆ. ಆದ್ದರಿಂದ ಮಲೆನಾಡಿಗರು ಅವರಿಗೆಲ್ಲಾ ಬರಬೇಡಿ ಅಲ್ಲೇ ಇರಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲೂ ಗ್ರಾಮದ ಮುಖ್ಯ ರಸ್ತೆಗೆ ಬೇಲಿ ಹಾಕಿ ಗ್ರಾಮಸ್ಥರು ಊರಿಗೆ ಯಾರೂ ಹೊರಗಿನಿಂದ ಬಾರದಂತೆ ಕಾದು ಕೂತಿದ್ದಾರೆ. ಒಳಗಿನವರು ಹೊರ ಹೊಗುವಂತಿಲ್ಲ. ಯಾರೇ ಆದರೂ ಹೊರಗಿನವರಂತೂ ಬಿಲ್‍ಕುಲ್ ಒಳಗೆ ಬರುವಂತಿಲ್ಲ ಎಂದು ಮುಖ್ಯ ರಸ್ತೆಗೆ ಬೇಲಿ ಹಾಕಿಕೊಂಡು ಕಾದು ಕೂತಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಗ್ರಾಮಕ್ಕೆ ಬಂದ ನೆಂಟರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ವಾಪಸ್ ಕಳುಹಿಸಿದ್ದಾರೆ. ಈಗಾಗಲೇ ಕೊರೊನಾದಿಂದ ಆತಂಕಕ್ಕೀಡಾಗಿರೋ ಮಲೆನಾಡಿನ ಮತ್ತಾವರ ಗ್ರಾಮದಲ್ಲಿ ಹಳ್ಳಿಕಟ್ಟೆ ಮುಂದೆ ಯುವಕರು ಕಾದು ಕೂತಿದ್ದು, ಗ್ರಾಮಕ್ಕೆ ಹೊಸಬರು ಬಂದರೆ ವಾಪಸ್ ಕಳುಹಿಸುತ್ತಿದ್ದಾರೆ. ಇತ್ತ ದೂರದೂರಲ್ಲಿ ಇರುವವರಿಗೆ ಅಲ್ಲೇ ಇರಿ ಗ್ರಾಮಕ್ಕೆ ಬರಬೇಡಿ ಎಂದು ಫೋನ್ ಮಾಡಿ ಹೇಳುತ್ತಿದ್ದಾರೆ. ಮೂಡಿಗೆರೆಯ ಮರ್ಕಲ್ ಗ್ರಾಮದಲ್ಲಿ ರಸ್ತೆಗೆ ತಂತಿ ಬೇಲಿ ಹಾಕಿದ್ರೆ, ಕೆಲ್ಲೂರು ಗ್ರಾಮದಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ ಎಂದು ರಸ್ತೆ ತುಂಬಾ ಬ್ಯಾನರ್ ಕಟ್ಟಿದ್ದಾರೆ.